ಇಂದು ಏಪ್ರಿಲ್ ೧. ಮೂರ್ಖರ ದಿನವಂತೆ. ಅಂತೆ ಎನ್ನಲು ಕಾರಣವಿದೆ. ಈಗ ಯಾರೂ ಮೂರ್ಖರ ದಿನ ಆಚರಿಸುವುದಿಲ್ಲ. ಅದು ಅಪ್ರಬುದ್ಧರ ಬಾಲಿಷ ಆಚರಣೆ; ಏನೂ ಮಾಡಲು ಕೆಲಸವಿಲ್ಲದವರು ಹೊತ್ತು ಕಳೆಯಲು ಆಡುವ ಮೋಜಿನಾಟ ಇದು. ಅಂತಹ ಮೋಜಿನಾಟವನ್ನು ಇಂದು ಕನ್ನಡದ ಸುದ್ದಿ ಚಾನಲ್ಲೊಂದು ಆಡಿತು.
ಜಗತ್ತಿನ ಆಗುಹೋಗುಗಳ ಬಗ್ಗೆ ಆಸಕ್ತಿಯಿರುವ ಬಹುತೇಕ ಮಂದಿ ಪ್ರೈಮ್ ಟೈಮ್ ನಲ್ಲಿ ಬರುವ ಸುದ್ದಿಯನ್ನು ವೀಕ್ಷಿಸುತ್ತಾರೆ. ನಾನು ಕೂಡಾ ಇಂದು ೭ ಘಂಟೆಗೆ ಟೀವಿ ಆನ್ ಮಾಡಿದೆ. ’ ಜನಾರ್ಧನ ರೆಡ್ಡಿ ರಾಜಿನಾಮೆ, ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ; ಕೇಂದ್ರ ನಾಯಕರ ಸಭೆ’ ಎಂಬ ಬ್ರೇಕಿಂಗ್ ನ್ಯೂಸ್ ಸ್ಕ್ರೋಲಿಂಗ್ ಆಗುತ್ತಿತ್ತು.
ಸಂಜೆಯ ಜಡತ್ವ, ಆಲಸಿತನ ಎಲ್ಲವೂ ತಟ್ಟನೆ ಹಾರಿ ಹೋಗಿ ಕಣ್ಣು, ಕಿವಿ ಚುರುಕಾಯಿತು. ಹೆಚ್ಚಿನ ಮಾಹಿತಿಗಾಗಿ ಸುದ್ದಿ ಚಾನಲ್ ಗಳನ್ನೆಲ್ಲಾ ಜಾಲಾಡಿದೆ. ಎಲ್ಲಿಯೂ ಆ ಸುದ್ದಿಯ ಸುಳಿವೇಇಲ್ಲ. ಪುನಃ ಅದೇ ಚಾನಲಿಗೆ ಬಂದಾಗ ದೇವೆಗೌಡರು ಪೋನೊದಲ್ಲಿದ್ದರು. ಆ ಮಾತಿನ ವರಸೆ ಕೇಳಿದಾಗ, ಇದು ಗೌಡರಲ್ಲವಲ್ಲಾ ಎನಿಸುತ್ತಿತ್ತು. ಮುಂದೆ ದೇಶಪಾಂಡೆ ಪೋನಿಗೆ ಬಂದರು. ಸಂಶಯ ಹೆಚ್ಚಾಯಿತು. ಖರ್ಗೆ ಪೋನಿಗೆ ಬಂದಾಗ ಇದು ಚಾನಲ್ ನವರು ವಿಕ್ಷಕರನ್ನು ಫೂಲ್ ಮಾಡಲು ನಡೆಸಿದ ಮೂರ್ಖರಾಟ ಎಂದು ಕನ್ಫರ್ಮ್ ಆಯ್ತು. ’ಥೂ ಇವ್ರಾ’ ಎಂದು ಪತ್ರಿಕೋದ್ಯಮದ ಬೇಜವಾಬ್ದರಿತನದ ಬಗ್ಗೆ ಗೊಣಗಿಕೊಂಡೆ. ಅದನ್ನು ಆಲಿಸಿದ ಪಕ್ಕದ ಮನೆಯ ಎಂಟನೆ ಕ್ಲಾಸಿನ ಚೇತೂ ’ನಾವೇ ಏಪ್ರೀಲ್ ಫೂಲ್ ಮಾಡೊಲ್ಲ. ಅವರಿಗೆ ಬುದ್ಧಿ ಇಲ್ವಾ ಆಂಟಿ?’ ಎಂದು ಪ್ರಶ್ನಿಸಿದ.
ಪತ್ರಿಕೆಯಲ್ಲಿ, ಸುದ್ದಿ ಚಾನಲ್ ಗಳಲ್ಲಿ ತಪ್ಪುಗಳಾಗುವುದು ಸಾಮಾನ್ಯ. ಇದೊಂದು ಟೀಮ್ ವರ್ಕ್. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ತಲೆ ದಂಡ ತೆರಬೇಕಾಗುತ್ತದೆ. ಆದರೆ ಚಾನಲ್ ಮುಖ್ಯಸ್ಥರೆ ಇಂತಹ ಬೇಜವಾಬ್ದಾರಿತನಕ್ಕೆ ಬೆಂಗಾವಲಾಗಿ ನಿಂತರೆ..?ಅವರೇ ಹಿಂದೆ ಕುಳಿತು ಇದನ್ನೆಲ್ಲಾ ಎಂಜಾಯ್ ಮಾಡುತ್ತಿದ್ದುದು ವೀಕ್ಷಕರಿಗೆ ಸ್ಪಷ್ಟವಾಗಿ ಕಾಣುತ್ತಿತ್ತು. ಅವರು ನೀಡುವ ಸುದ್ದಿ ಯಾವ ಪರಿಣಾಮವನ್ನುಂಟು ಮಾಡಬಹುದೆಂಬ ಕನಿಷ್ಟ ಅರಿವಿದ್ದಿದ್ದರೆ ಹೀಗಾಗುತ್ತಿರಲಿಲ್ಲ.
ಏಪ್ರಿಲ್ ೧ರಂದು ಓದುಗರನ್ನು ಮೂರ್ಖರನ್ನಾಗಿ ಮಾಡುವ ಕೆಟ್ಟ ಚಾಳಿ ಆರಂಭಿಸಿದ ಕೀರ್ತಿ ಸೇರಬೇಕಾದ್ದು ಈಶ್ವರ ದೈತೋಟರಿಗೆ ಅವರು ಸಂಪಾದಕರಾಗಿದ್ದಾಗ ಇಡೀ ಉದಯವಾಣಿಯನ್ನು ಮೂರ್ಖರವಾಣಿಯನ್ನಾಗಿ ಮಾಡಿದ್ದರು. ಈಗ ’ಕನ್ನಡಪ್ರಭ’ ಕೂಡ ಓದುಗರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದೆ. ಇವತ್ತಿನ ’ಕನ್ನಡಪ್ರಭ’ದ ಮುಖಪಟ ವರಧಿ; ”ಬಿಬಿಎಂಪಿ ಫಲಿತಾಂಶ ಈಗ ಅತಂತ್ರ, ಮರು ಚುನಾವಣೆ? ಮತಯಂತ್ರ ಹಾನಿ,ದತ್ತಾಂಶ ನಾಶ?” ಎಂದು ಹೊಡೆದು ಮಲಗಿಸಿದೆ.
ಇವರೆಲ್ಲಾ ಯಾರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದಾರೆ? ಇವರಿಗೆಲ್ಲಾ ಅದೇ ಕೆಲಸವಾಗಿರಬಹುದು. ಆದರೆ ವೀಕ್ಷಕರಿಗಲ್ಲ; ಓದುಗರಿಗಲ್ಲ. ಅವರ ಸಮಯ ಅಮೂಲ್ಯವಾದುದು. ಹಾಗಾಗಿ ಜವಾಬ್ದಾರಿ ಸ್ಥಾನದಲ್ಲಿರುವವರು ಏಪ್ರಿಲ್ ಫೂಲ್ ಮಾಡಲು ಹೊರಟರೆ ಅವರ ಬಗ್ಗೆ ಮರುಕ ಹುಟ್ಟುತ್ತದೆ
0 comments:
Post a Comment