Visitors

ಕುಲಾಂತರಿ ಬೀಜ; ವಾಚಾಳಿಗಳಚರ್ಚೆ

ಬ್ಲಾಗ್ ಬರೆಯುವುದರಲ್ಲಿನ ಆಸಕ್ತಿ ಹೊರಟು ಹೋಗಿದೆ. ಅರೋಗ್ಯಕರ ಅಂತರದಲ್ಲಿ ನಿಂತು ನೋಡಿದರೂ ಅದರಲ್ಲಿ ಹುಳುಕನ್ನು ಹುಡುಕಿ ತೆಗೆಯುವವರೇ ಹೆಚ್ಚಾಗಿದ್ದಾರೆ. ಆದರೆ ಇವತ್ತು ಬರೆಯದೆ ಇರಲಾಗಲಿಲ್ಲ.

ಕುಲಾಂತರಿ ಬದನೆ ತಳಿಯನ್ನು ಭಾರತದಲ್ಲಿ ಬೆಳೆಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಜೈವಿಕ ತಂತ್ರಜ್ನಾನ ನಿಯಂತ್ರಣ ಸಂಸ್ಥೆಯ ’ಜೆನೆಟಿಕ್ ಎಂಜಿನಿಯರಿಂಗ್ ಅಪ್ರೂವಲ್ ಕಮಿಟಿ’ ನಿನ್ನೆ ಒಪ್ಪಿಗೆ ನೀಡಿದೆ. ರೈತ ಸಂಘಟನೆಗಳು ಬಿಟಿ ಹತ್ತಿ, ಬಿಟಿ ಬದನೆ ಮುಂತಾದ ಕುಲಾಂತರಿ ತಳಿಗಳ ವಿರುದ್ದ ದಶಕಗಳಿಂದಲೂ ಹೋರಾಟ ಮಾಡುತ್ತಾ ಬಂದಿವೆ. ಪ್ರೋ. ನಂಜುಂಡಸ್ವಾಮಿಯವರಂತೂ ಮಾನ್ಸಂಟೋ ಕಂಪೆನಿಯ ವಿರುದ್ಧ ಸೆಡ್ಡು ಹೊಡೆದು ನಿಂತಿದ್ದರು.

ಇಂದು ಕನ್ನಡದ ಎರಡು ಸುದ್ದಿಚಾನಲ್ ಗಳು ಬಿಟಿ ಬದನೆಯ ಕುರಿತು ಅರ್ಧ ಘಂಟೆಯ ಕಾರ್ಯಕ್ರಮ ನಡೆಸಿಕೊಟ್ಟವು. ಸಮಯೋಚಿತವದುದೇ. ಆದರೆ ನಿರೂಪಕರಲ್ಲಿ ಅಧ್ಯಯನದ ಕೊರತೆ ಎದ್ದು ಕಾಣುತ್ತಿತ್ತು. ಎರಡೂ ಚಾನಲ್ ನಲ್ಲಿ ವಿಷಯದ ಪರ ಮತ್ತು ವಿರೋಧ ಕುರಿತು ಮಾತಾಡುವ ಇಬ್ಬರು ತಜ್ನರಿದ್ದರು. ಅವರಲ್ಲಿನ ಮಾಹಿತಿಯನ್ನು ಹೊರಗೆಳೆದು ವಿಚಾರ ಮಂಥನ ನಡೆಸುವಲ್ಲಿ ನಿರೂಪಕರು ವಿಪಲರಾಗಿ ಅವರ ದಡ್ಡತನವೇ ಎದ್ದು ಕಾಣುತ್ತಿತ್ತು.

ನಿರೂಪಕರಿಗೆ ವಿಷಯದ ಆಳ ಅರಿವು ಇರಬೇಕೆಂದಿಲ್ಲ. ಅಥಿತಿಗಳನ್ನು ಪರಸ್ಪರ ಚರ್ಚೆಗೆ ದೂಡಿಬಿಟ್ಟು, ಅದು ಅತಿರೇಕಕ್ಕೆ ಹೋಗದಂತೆ ನೋಡಿಕೊಂಡು ತಾವು ಸಮನ್ವಯಕಾರರಾಗಿ ಹಳಿ ತಪ್ಪದಂತೆ ನೋಡಿಕೊಂಡರಾಯಿತು. ಅದಕ್ಕೆ ವಿಷಯದ ಪ್ರಾಥಮಿಕ ಜ್ನಾನವಿದ್ದರೂ ಸಾಕಾಗುತ್ತದೆ.

ಕುಲಾಂತರ‍ಿ ಬೀಜ ನಮ್ಮ ದೇಶಕ್ಕೆ ಬಂದರೆ ಏನಾಗುತ್ತೆ? ನಮ್ಮ ರೈತರಿಗೆ ಬೀಜದ ಮೇಲಿನ ಹಕ್ಕು ಹೊರಟು ಹೋಗುತ್ತೆ. ಪಿಳಿಗೆಯಿಂದ ಪಿಳಿಗೆಗೆ ಹರಿದು ಬಂದಿರುವ ಈ ಹಕ್ಕು ಕಳೆದುಹೋಗಿ ಬಹುರಾಷ್ಟ್ರೀಯ ಬೀಜ ಕಂಪಿನಿಗಳ ಮುಂದೆ ನಮ್ಮ ರೈತ ಬೀಜಕ್ಕಾಗಿ ಬೊಗಸೆಯೊಡ್ಡಿ ನಿಲ್ಲಬೇಕಾಗುತ್ತೆ. ನಮ್ಮ ಆಹಾರ ಸ್ವಾವಲಂಬನೆ ಹೊರಟು ಹೋಗುತ್ತೆ. ಅವರ ಬೀಜಕ್ಕೆ ಅವರು ಶಿಪಾರಸ್ಸು ಮಾಡಿದ ಗೊಬ್ಬರವನ್ನು ಹಾಕಬೇಕಾಗುತ್ತೆ.ನಮ್ಮ ತಟ್ಟೆಯ ಮೇಲೆ ಬಹುರಾಷ್ಟ್ರೀಯ ಕಂಪೆನಿಗಳ ಸ್ವಾಮ್ಯತೆ.

ಎರಡನೆಯದಾಗಿ ಕುಲಾಂತರಿ ಬೀಜವೆಂಬುದು ನಿಸರ್ಗವಿರೋಧಿ. ಅದು ಜೀವ ಸಂಕುಲದ ಸಹಜ ಅರಳುವಿಕೆಯಲ್ಲ. ಒಂದು ಜೀವಿಯ ವಂಶವಾಹಿನಿಯನ್ನು ಇನ್ನೊಂದು ಜೀವಿಯ ವಂಶವಾಹಿನಿಯೊಳಗೆ ಬಲವಂತವಾಗಿ ತುರುಕುವುದು. ಪ್ರಾಣಿಗಳ ವಂಶವಾಹಿನಿಯನ್ನು ತರಕಾರಿಯ ವಂಶವಾಹಿನಿಯಯೊಳಗೆ ಸೇರಿಸಿ ಇನ್ನೊಂದನ್ನು ಸೃಷ್ಟಿಸುವುದು; ಇದು ಒರಿಜಿನಲ್ ಅಲ್ಲ. ಇದನ್ನು ಮನುಷ್ಯ ತಿಂದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲು ಸಾಧ್ಯವೇ? ಈ ಪ್ರಾಥಮಿಕ ಜ್ನಾನವಿದ್ದರೂ ಸಾಕು ಕಾರ್ಯಕ್ರಮವನ್ನು ನಿಭಾಯಿಸಬಹುದು.

ಪ್ರಾಥಮಿಕ ಜ್ನಾನವೇ ಇಲ್ಲದೆ ನಿರೂಪಕರ ಸೀಟಲ್ಲಿ ಕುಳಿತರೆ ಹೇಗೆ? ರೈತಾಪಿ, ಹಳ್ಳಿಯಿಂದ ಮುಂತಾದ ಬ್ಲಾಗ್ ಲೋಕವನ್ನಾದರೂ ಒಮ್ಮೆ ಹೊಕ್ಕು ಬರಬಾರದೇ?!