Visitors

ವಿಶ್ವೇಶಭಟ್ಟರು ಹೋದರು ಶಶಿಧರ್ ಭಟ್ಟರು ಬಂದರು !

ಕಳೆದ ವಾರ ವಿಜಯಕರ್ನಾಟಕದ ಸಂಪಾದಕರಾಗಿದ್ದ ವಿಶ್ವೇಶಭಟ್ಟರು ರಾಜೀನಾಮೆ ಕೊಟ್ಟಾಗ ನನ್ನ ಗೆಳತಿಯೊಬ್ಬಳು ಪ್ರತಿಕ್ರಿಯಿಸಿದ್ದು ಹೀಗೆ; ಇದು ಪತ್ರಿಕೋದ್ಯಮದ ನೈತಿಕತೆಗೆ ಸಿಕ್ಕಿದ ಜಯ.

ಈ ಮಾತು ಸ್ವಲ್ಪ ಅತಿಶಯೋಕ್ತಿ ಎನಿಸಿದರೂ ಇತ್ತೀಚಿಗಿನ ವರ್ಷಗಳಲ್ಲಿ ಪತ್ರಿಕಾರಂಗವು ಒಂದು ಉದ್ಯಮವಾಗಿ ಬೆಳೆದ ಬಗೆ ಮತ್ತು ಅದರ ಲಾಭಾಂಶವನ್ನು ಪಡೆಯುತ್ತಿರುವ ದೊಡ್ಡ ಪಡೆ ಸೃಷ್ಟಿಯಾಗಿರುವುದನ್ನು ಗಮನಿಸಿದಾಗ ಇದರಲ್ಲಿ ಹುರುಳಿದೆ ಎನಿಸದಿರದು.

ಪ್ರಜಾಪ್ರಭುತ್ವದ ಮೂರು ಸ್ತಂಭಗಳಾದ ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಾಂಗಗಳ ಜೊತೆಗೆ ಪತ್ರಿಕಾರಂಗವನ್ನು ನಾಲ್ಕನೆಯ ಸ್ತಂಬವೆಂದು ಪರಿಗಣಿಸಲಾಗುತ್ತದೆ. ಪ್ರಜಾಪ್ರಭುತ್ವದ ಉಳಿವಿಗೆ ಈ ನಾಲ್ಕು ಸ್ತಂಭಗಳು ಒಟ್ಟಾಗಿ ಕೆಲಸ ಮಾಡಬೇಕು. ಆದರೆ ಹಾಗಾಗುತ್ತಿದೆಯೇ?

ಆಳುವ ದೊರೆಗಳು ದಾರಿ ತಪ್ಪಿದಾಗ ಜನ ಮಾಧ್ಯಮದತ್ತ ನೋಡುತ್ತಾರೆ. ಆದರೆ ಸಮಾಜದ ಸಾಕ್ಷಿಪ್ರಜ್ನೆಯಂತೆ ಕೆಲಸ ಮಾಡಬೇಕಾದ ಮಾಧ್ಯಮಗಳು ಒಂದು ಪಕ್ಷದ, ಒಂದು ವ್ಯಕ್ತಿಯ ತುತ್ತೂರಿಯಾಗಿಬಿಟ್ಟರೆ....?ಪತ್ರಕರ್ತರು ವೈಯಕ್ತಿಕ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು, ಹೆಣ್ಣು -ಹೊನ್ನು-ಮಣ್ಣನ್ನು ಪುಕ್ಕಟೆಯಾಗಿ ಪಡೆದುಕೊಳ್ಳಲು ಮಾಧ್ಯಮವನ್ನು ಅಸ್ತ್ರದಂತೆ ಬಳಸತೊಡಗಿದರೆ....?ಗುಂಪುಗಾರಿಕೆ, ಸ್ವಜನಪಕ್ಷಪಾತದಲ್ಲಿ ರಾಜಕಾರಣಿಗಳನ್ನೂ ಮೀರಿಸತೊಡಗಿದರೆ.....?ಜನರು ಮಾಧ್ಯಮವನ್ನು ಸಂಶಯದಿಂದಲೇ ನೋಡುತ್ತಾರೆ. ಸಾಮಾಜೀಕ ನ್ಯಾಯ ಎಂಬ ಪರಿಕಲ್ಪನೆಯೇ ಹುಸಿಯಾಗುತ್ತದೆ.

ರಾಡಿಯಾ ಟೇಪ್ ಹಗರಣದಿಂದ ಹಿಡಿದು ವಿಶ್ವೇಶಭಟ್ಟರ ರಾಜೀನಾಮೆ ಪ್ರಕರಣದವರೆಗೆ ಜನ ಮುಕ್ತವಾಗಿ ಮಾತಾಡುತ್ತಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ಎಗ್ಗಿಲ್ಲದೆ ಹರಿಯಬಿಡುತ್ತಿದ್ದಾರೆ. ಆದರೆ ಮಾಧ್ಯಮ ಇದರ ಬಗ್ಗೆ ಮುಗುಮ್ಮಾಗಿ ಮುಸುಕು ಹೊದ್ದು ಕುಳಿತಿದೆ. ತಮ್ಮ ಸ್ವಂತದ ಪೇಸ್ ಬುಕ್, ಬ್ಲಾಗ್ ಗಳಲ್ಲಿಯೂ ಬರೆಯಲೂ ಹೆದರುತ್ತಿದ್ದಾರೆ. ರಾಜಕಾರಣಿಗಳಂತೂ ಪತ್ರಕರ್ತರ ಸಹವಾಸದಿಂದಲೇ ದೂರವಿದ್ದರೆ ಒಳಿತು ಎಂಬಂತೆ ವರ್ತಿಸುತ್ತಿದ್ದಾರೆ. ಮಾಧ್ಯಮ ಟೆರರಿಸಂ ಎಂದರೆ ಇದೇ ಇರಬಹುದೇ?

ಇಂತಹ ಸನ್ನಿವೇಶದಲ್ಲಿ ’ಸಮಯ ನ್ಯೂಸ್’ ವಾಹಿನಿಯ ಮುಖ್ಯಸ್ಥರಾಗಿ ಹಿರಿಯ ಪತ್ರಕರ್ತ ಶಶಿಧರ್ ಭಟ್ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಭಟ್ಟರು ’ಸುವರ್ಣ ನ್ಯೂಸ್’ ಚಾನಲ್ ಅನ್ನು ಕಟ್ಟಿ ಬೆಳೆಸಿದ್ದರು. ಅನಂತರ ಅದನ್ನು ಎಚ್.ಆರ್. ರಂಗನಾಥ್ ಆಕ್ರಮಿಸಿಕೊಂಡಿದ್ದರು.

ಸುವರ್ಣ ನ್ಯೂಸ್ ಚಾನಲ್ ಆರಂಭಗೊಂಡಾಗ ಭಟ್ಟರು ಸೂತ್ರದ ಗೊಂಬೆಯಂತಿದ್ದರು. ಅವರಿಗೆ ಯಾವ ಅಧಿಕಾರವೂ ಇರಲಿಲ್ಲ. ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿರುವ ಉದ್ಯಮಿ ರಾಜೀವ ಚಂದ್ರಶೇಖರ ಚಾನಲ್ ಮಾಲೀಕರಾಗಿದ್ದರು. ಹಿರಿಯ ನಟಿ ಮೈನಾವತಿ ಮಗ ಶ್ಯಾಮಸುಂದರ್ ಸಿಇಓ ಆಗಿದ್ದರು. ಅವರ ನಿಧನದ ನಂತರ ಸಿಇಓ ಆಗಿ ಬಂದವರು ಸಂಜಯಪ್ರಭು. ಅವರಿಗೆ ಕನ್ನಡ ಬಾರದು. ಕನ್ನಡ ಬಾರದ ಮಾಲೀಕ ಮತ್ತು ಸಿಇಓ. ಅವರ ದೃಷ್ಟಿಯಲ್ಲಿ ಪತ್ರಕರ್ತರು ಕೂಡಾ ಕಾರ್ಮಿಕರೇ.
ಚಾನಲ್ ನಲ್ಲೇ ಗುಂಪುಗಳಾದವು. ಭಟ್ಟರ ವಿರುದ್ಧ ಗುಂಪನ್ನು ಸಿಇಓ ಎತ್ತಿಕಟ್ಟಿದರು. ಈ ಸಮಯದಲ್ಲೇ ಕನ್ನಡಪ್ರಭದ ರಂಗನಾಥ್ ಚಾನಲ್ ಮುಖ್ಯಸ್ಥರಾದರು. ಪತ್ರಕರ್ತರಾಗಿದ್ದೂ ಬ್ಯುಸಿನೆಸ್ ಮ್ಯಾನ್ ಆಗಿರುವ ರಂಗನಾಥ್ ಮಾಲೀಕರ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುತ್ತಾ ಪರಸ್ಪರ ಆಸರೆಯಾಗತೊಡಗಿದರು. ಶಶಿಧರ್ ಭಟ್ ರನ್ನು ಜ್ಯುಪಿಟರ್ ಗೆ ವರ್ಗಯಿಸಲಾಯ್ತು. ಕನ್ನಡಪ್ರಭದಿಂದ ಜೋಗಿ, ರವಿಹೆಗ್ಡೆ, ಉದಯ ಮರಕಿಣಿ ಸೇರಿದಂತೆ ಸುಮಾರು ೫೦ ಜನರ ದಂಡು ಸುವರ್ಣಕ್ಕೆ ಧಾಳಿಯಿಟ್ಟಿತು. ಖರ್ಚು ದುಪ್ಪಟ್ಟಾಯಿತು. ಕೆಲಸವಿಲ್ಲದೆ ಕುಳಿತ್ತಿದ್ದ ಭಟ್ಟರು ಸುವರ್ಣ ಗ್ರೂಪ್ ಬಿಟ್ಟು ಹೊರನಡೆದರು.

ಈಗ ಶಶಿದರ್ ಭಟ್ ಸಮಯ ನ್ಯೂಸ್ ಚಾನಲ್ ಹೆಡ್ ಆಗಿ ಗುರುವಾರ ಸಂಜೆ ಅಧಿಕಾರ ಸ್ವೀಕರಿಸಿದ್ದಾರೆ. ಈಗ ಅವರು ಸುವರ್ಣ ನ್ಯೂಸ್ ಚಾನಲ್ ನಲ್ಲಿದ್ದಂತೆ ನಿರಾಯುಧರಲ್ಲ. ಶಸ್ತ್ರ ಸಜ್ಜಿತರಾಗಿ ಬಂದಿದ್ದಾರೆ. ಜೊತೆಗೆ ಕೈಯಲ್ಲಿ ಕತ್ತರಿ ಇದೆ.
ಅಲ್ಲಿ ವಿಜಯಕರ್ನಾಟಕದಲ್ಲಿ ತಾತ್ಕಾಲಿಕ ಸಂಪಾದಕರಾಗಿರುವ ಇ. ರಾಘವನ್ ಅವರು ಶುದ್ಧಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೊಸ ಸಂಪಾದಕರ ಆಗಮನವನ್ನು ಪತ್ರಿಕೆ ಕಾಯುತ್ತಿದೆ. ಕಳಂಕ ರಹಿತ, ಪ್ರಾಮಾಣಿಕ ಪತ್ರಕರ್ತರಾದ ದಿನೇಶ್ ಅಮಿನಮಟ್ಟು ಹೆಸರು ಮುಂಚೂಣಿಯಲ್ಲಿದೆ. ಅವರು ಆ ಹುದ್ದೆಯನ್ನು ಅಲಂಕರಿಸಿದರೆ ನಿಜವಾಗಿಯೂ ನಿಶಾದ ಕಂಜರಿ ಖುಷಿ ಪಡುತ್ತಾಳೆ.

ದೃಶ್ಯ ಮಾಧ್ಯಮದಲ್ಲಿ ಶಶಿಧರ್ ಭಟ್, ಮುದ್ರಣ ಮಾಧ್ಯಮದಲ್ಲಿ ಅಮಿನಮಟ್ಟು. ಆಗ ನನ್ನ ಗೆಳತಿ ಹೇಳಿದ ಮಾತು ನಿಜವಾಗುತ್ತದೆ ’ಇದು ಪ್ರಾಮಾಣಿಕ ಪತ್ರಿಕೋಧ್ಯಮಕ್ಕೆ ಸಿಕ್ಕ ನೈತಿಕ ಜಯ’
ಆದರೆ ಹಾಗಾಗುತ್ತದೆಯೇ? ಕಷ್ಟ ಸಾಧ್ಯ.
ಯಾಕೆಂದರೆ ಕನ್ನಡ ಪತ್ರಿಕೋದ್ಯಮ ತುಂಬಾ ಚಿಕ್ಕ ಕ್ಷೇತ್ರ. ಕಳಂಕಿತರೆಲ್ಲಾ ಮತ್ತೆ ಆಯಕಟ್ಟಿನ ಜಾಗಗಳನ್ನು ಹುಡುಕಿಕೊಳ್ಳುತ್ತಿರುವ ವಿಚಾರ ನಿಷಾದ ಕಂಜರಿಗೆ ಗೊತ್ತಾಗಿದೆ. ಇರಲಿ. ಭೂಮಿ ಗುಂಡಗಿದೆ. ಎಲ್ಲಾದರೂ ಒಂದು ಕಡೆ ನಾವು ಸಂಧಿಸಲೇ ಬೇಕು!

ಬ್ರೇಕಿಂಗ್ ನ್ಯೂಸ್; ಸುವರ್ಣದಿಂದ ಶಶಿಧರ್ ಭಟ್ ಹೊರಕ್ಕೆ....?

ಕೊನೆಗೂ ಎಚ್ ಆರ್ ರಂಗನಾಥ್ ಶಶಿಧರ್ ಭಟ್ ಅವರನ್ನು ಸುವರ್ಣ ಗ್ರೂಪಿನಿಂದ ಹೊರದೂಡುವುದರಲ್ಲಿ ಯಶಸ್ವಿಯಾಗಿದ್ದಾರೆ.

ಇವತ್ತು ಬೆಳಿಗ್ಗೆ ಭಟ್ಟರನ್ನು ಅವರ ಅಪೀಸಿನಲ್ಲಿ ಕಂಡ ಸಿ.ಇ. ಒ ಸಂಜಯ ಪ್ರಭು, ನಿಮ್ಮ ಮೇಲೆ ಸುವರ್ಣ ನ್ಯೂಸ್ ಮುಖ್ಯಸ್ಥರಾದ ರಂಗನಾಥ್ ಹತ್ತು ಆರೋಪಗಳನ್ನು ಮಾಡಿದ್ದಾರೆ. ಅದಕ್ಕಾಗಿ ನೀವು ವಿಚಾರಣೆಯನ್ನು ಎದುರಿಸಬೇಕಾಗಿದೆ ಎಂದು ಹೇಳಿದರಂತೆ. ಅದಕ್ಕೆ ಭಟ್ಟರು, ನೀವು ಅವರನ್ನು ನಂಬುತ್ತಿರಿ ಅಂದ ಮೇಲೆ ನಾನು ನನ್ನನ್ನು ಸಮರ್ಥಿಸಿಕೊಳ್ಳಬೇಕಾದ ಅವಶ್ಯಕತೆಯಿಲ್ಲ. ಎಂದು ಸಂಸ್ಥೆಯಿಂದ ಹೊರಬಂದಿದ್ದಾರೆ.

ಭಟ್ಟರನ್ನು ಹೊರಹಾಕಲು ರಂಗನಾಥನಿಗೆ ಸಿಕ್ಕ ಪ್ರಮುಖ ಕಾರಣವೇನು ಗೊತ್ತಾ? ಸಮಯ ನ್ಯೂಸ್ ಚಾನಲ್ ನ ಉದ್ಘಾಟನೆಯಂದು ಅದರ ಮಾಲೀಕರಾದ ಜಾರಕಿ ಹೊಳೆಯವರು ಭಟ್ಟರನ್ನು ಕೃತಜ್ನತೆಯಿಂದ ಸ್ಮರಿಸಿಕೊಂಡದ್ದು. ಕೃತಜ್ನತೆ ಎಂದರೆನೆಂಬುದು ರಂಗನಾಥನಿಗೆ ಅರ್ಥವಾಗದ ಪದ [ಹೆಚ್ಚಿನ ವಿವರಕ್ಕೆ ಇದೇ ಬ್ಲಾಗಿನಲ್ಲಿ ’ರಂಗನಾಥನೆಂಬ ಸಂಕೇತಿಯೂ ಶಶಿಧರ ಭಟ್ಟರೂ..” ಎಂಬ ಪೋಸ್ಟ್ ಅನ್ನು ನೋಡಿ] ಸುಮಾರು ಹನ್ನೆರಡು ವರ್ಷಗಳ ಹಿಂದೆ-ಆಗ ಭಟ್ಟರು ಝೀ ಟೀವಿ ಮಾಲಕತ್ವದ ಕಾವೇರಿ ಚಾನಲ್ ನ ಮುಖ್ಯಸ್ಥರಾಗಿದ್ದರು-] ಜಾರಕಿ ಹೊಳೆಯವರ ಕೋರಿಕೆಯ ಮೇರೆಗೆ ಕನ್ನಡದಲ್ಲಿ ಚಾನಲ್ಲೊಂದನ್ನು ಪ್ರಾರಂಭಿಸುವುದರ ಕುರಿತಾಗಿ ವಿವರವಾದ ಯೋಜನಾ ವರಧಿಯೊಂದನ್ನು ಸಲ್ಲಿಸಿದ್ದರು. ಸಮಯ ಚಾನಲ್ ಆರಂಭಿಸುವುದಕ್ಕೆ ಅದೇ ತಮಗೆ ಸ್ಪೂರ್ತಿಯಾಗಿತ್ತು ಎಂದು ಅವರು ಕೃತಜ್ನತೆಯಿಂದ ನೆನೆಸಿಕೊಂಡಿದ್ದಾರೆ. ಅದು ಸಮಯ ಚಾನಲ್ ನಲ್ಲಿ ಪ್ರಸಾರವಾಗಿದೆ.

ರಂಗನಾಥ್ ಜಾರಕಿಹೊಳೆಯವರ ಭಾಷಣವನ್ನು ಎಡಿಟ್ ಮಾಡಿಸಿ ಸುವರ್ಣದ ಮಾಲಕರಾದ ರಾಜೀವ್ ಚಂದ್ರಶೇಖರ್ ಅವರಿಗೆ ಕಳುಹಿಸಿದ್ದಾರೆ. ಅದರ ಜೊತೆಗೆ ಭಟ್ಟರ ಮೇಲೆ ಹತ್ತು ಅಪಾದನೆಗಳನ್ನು ಹೊರಿಸಿದ್ದಾರೆ. ಅದರ ಮುಖ್ಯ ತಿರುಳೆಂದರೆ ಭಟ್ಟರು ಚಾನಲ್ಲಿನಲ್ಲಿ ಇದ್ದುಕೊಂಡೇ ಅದರ ಅದಪತನಕ್ಕೆ ಹೇಗೆ ಕಾರಣರಾಗುತ್ತಿದ್ದಾರೆ ಎಂಬುದು. ಕನ್ನಡದ ಗಂಧ ಗಾಳಿಯೂ ಗೊತ್ತಿಲ್ಲದ ಸುವರ್ಣದ ಮುಖ್ಯಸ್ಥರಿಗೆ ರಂಗನಾಥ ಹೇಳಿದುದೆಲ್ಲಾ ವೇದ ವಾಕ್ಯವಾಗುತ್ತಿದೆ.

ಪತ್ರಿಕಾರಂಗವನ್ನು ಉದ್ಯಮವೆಂದು ಪರಿಗಣಿಸುವವರಿಗೆ ಪತ್ರಕರ್ತರು ಮತ್ತುದಲ್ಲಾಳಿಗಳ ನಡುವೆ ವ್ಯತ್ಯಾಸ ಗೊತ್ತಾಗಲಾರದು. ಅದರ ಪ್ರಯೋಜನವನ್ನು ಈಗಿನ ಬಹಳಷ್ಟು ಪತ್ರಕರ್ತರು ಪಡೆಯುತ್ತಿದ್ದಾರೆ. ಈ ಬೆಳವಣಿಗೆ ಪತ್ರಿಕಾರಂಗವನ್ನು ಸೇವಾಕ್ಷೇತ್ರವೆಂದು ಈಗಲೂ ನಂಬಿರುವ ಕೆಲವು ಮನಸ್ಸುಗಳಿಗಾಗುತ್ತಿರುವ ಆಘಾತ.

ಜೋಕರ್ ಗಳಾದ ಜರ್ನಲಿಸ್ಟ್ ಗಳು





ಇಂದು ಏಪ್ರಿಲ್ ೧. ಮೂರ್ಖರ ದಿನವಂತೆ. ಅಂತೆ ಎನ್ನಲು ಕಾರಣವಿದೆ. ಈಗ ಯಾರೂ ಮೂರ್ಖರ ದಿನ ಆಚರಿಸುವುದಿಲ್ಲ. ಅದು ಅಪ್ರಬುದ್ಧರ ಬಾಲಿಷ ಆಚರಣೆ; ಏನೂ ಮಾಡಲು ಕೆಲಸವಿಲ್ಲದವರು ಹೊತ್ತು ಕಳೆಯಲು ಆಡುವ ಮೋಜಿನಾಟ ಇದು. ಅಂತಹ ಮೋಜಿನಾಟವನ್ನು ಇಂದು ಕನ್ನಡದ ಸುದ್ದಿ ಚಾನಲ್ಲೊಂದು ಆಡಿತು.

ಜಗತ್ತಿನ ಆಗುಹೋಗುಗಳ ಬಗ್ಗೆ ಆಸಕ್ತಿಯಿರುವ ಬಹುತೇಕ ಮಂದಿ ಪ್ರೈಮ್ ಟೈಮ್ ನಲ್ಲಿ ಬರುವ ಸುದ್ದಿಯನ್ನು ವೀಕ್ಷಿಸುತ್ತಾರೆ. ನಾನು ಕೂಡಾ ಇಂದು ೭ ಘಂಟೆಗೆ ಟೀವಿ ಆನ್ ಮಾಡಿದೆ. ’ ಜನಾರ್ಧನ ರೆಡ್ಡಿ ರಾಜಿನಾಮೆ, ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ; ಕೇಂದ್ರ ನಾಯಕರ ಸಭೆ’ ಎಂಬ ಬ್ರೇಕಿಂಗ್ ನ್ಯೂಸ್ ಸ್ಕ್ರೋಲಿಂಗ್ ಆಗುತ್ತಿತ್ತು.

ಸಂಜೆಯ ಜಡತ್ವ, ಆಲಸಿತನ ಎಲ್ಲವೂ ತಟ್ಟನೆ ಹಾರಿ ಹೋಗಿ ಕಣ್ಣು, ಕಿವಿ ಚುರುಕಾಯಿತು. ಹೆಚ್ಚಿನ ಮಾಹಿತಿಗಾಗಿ ಸುದ್ದಿ ಚಾನಲ್ ಗಳನ್ನೆಲ್ಲಾ ಜಾಲಾಡಿದೆ. ಎಲ್ಲಿಯೂ ಆ ಸುದ್ದಿಯ ಸುಳಿವೇಇಲ್ಲ. ಪುನಃ ಅದೇ ಚಾನಲಿಗೆ ಬಂದಾಗ ದೇವೆಗೌಡರು ಪೋನೊದಲ್ಲಿದ್ದರು. ಆ ಮಾತಿನ ವರಸೆ ಕೇಳಿದಾಗ, ಇದು ಗೌಡರಲ್ಲವಲ್ಲಾ ಎನಿಸುತ್ತಿತ್ತು. ಮುಂದೆ ದೇಶಪಾಂಡೆ ಪೋನಿಗೆ ಬಂದರು. ಸಂಶಯ ಹೆಚ್ಚಾಯಿತು. ಖರ್ಗೆ ಪೋನಿಗೆ ಬಂದಾಗ ಇದು ಚಾನಲ್ ನವರು ವಿಕ್ಷಕರನ್ನು ಫೂಲ್ ಮಾಡಲು ನಡೆಸಿದ ಮೂರ್ಖರಾಟ ಎಂದು ಕನ್ಫರ್ಮ್ ಆಯ್ತು. ’ಥೂ ಇವ್ರಾ’ ಎಂದು ಪತ್ರಿಕೋದ್ಯಮದ ಬೇಜವಾಬ್ದರಿತನದ ಬಗ್ಗೆ ಗೊಣಗಿಕೊಂಡೆ. ಅದನ್ನು ಆಲಿಸಿದ ಪಕ್ಕದ ಮನೆಯ ಎಂಟನೆ ಕ್ಲಾಸಿನ ಚೇತೂ ’ನಾವೇ ಏಪ್ರೀಲ್ ಫೂಲ್ ಮಾಡೊಲ್ಲ. ಅವರಿಗೆ ಬುದ್ಧಿ ಇಲ್ವಾ ಆಂಟಿ?’ ಎಂದು ಪ್ರಶ್ನಿಸಿದ.

ಪತ್ರಿಕೆಯಲ್ಲಿ, ಸುದ್ದಿ ಚಾನಲ್ ಗಳಲ್ಲಿ ತಪ್ಪುಗಳಾಗುವುದು ಸಾಮಾನ್ಯ. ಇದೊಂದು ಟೀಮ್ ವರ್ಕ್. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ತಲೆ ದಂಡ ತೆರಬೇಕಾಗುತ್ತದೆ. ಆದರೆ ಚಾನಲ್ ಮುಖ್ಯಸ್ಥರೆ ಇಂತಹ ಬೇಜವಾಬ್ದಾರಿತನಕ್ಕೆ ಬೆಂಗಾವಲಾಗಿ ನಿಂತರೆ..?ಅವರೇ ಹಿಂದೆ ಕುಳಿತು ಇದನ್ನೆಲ್ಲಾ ಎಂಜಾಯ್ ಮಾಡುತ್ತಿದ್ದುದು ವೀಕ್ಷಕರಿಗೆ ಸ್ಪಷ್ಟವಾಗಿ ಕಾಣುತ್ತಿತ್ತು. ಅವರು ನೀಡುವ ಸುದ್ದಿ ಯಾವ ಪರಿಣಾಮವನ್ನುಂಟು ಮಾಡಬಹುದೆಂಬ ಕನಿಷ್ಟ ಅರಿವಿದ್ದಿದ್ದರೆ ಹೀಗಾಗುತ್ತಿರಲಿಲ್ಲ.

ಏಪ್ರಿಲ್ ೧ರಂದು ಓದುಗರನ್ನು ಮೂರ್ಖರನ್ನಾಗಿ ಮಾಡುವ ಕೆಟ್ಟ ಚಾಳಿ ಆರಂಭಿಸಿದ ಕೀರ್ತಿ ಸೇರಬೇಕಾದ್ದು ಈಶ್ವರ ದೈತೋಟರಿಗೆ ಅವರು ಸಂಪಾದಕರಾಗಿದ್ದಾಗ ಇಡೀ ಉದಯವಾಣಿಯನ್ನು ಮೂರ್ಖರವಾಣಿಯನ್ನಾಗಿ ಮಾಡಿದ್ದರು. ಈಗ ’ಕನ್ನಡಪ್ರಭ’ ಕೂಡ ಓದುಗರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದೆ. ಇವತ್ತಿನ ’ಕನ್ನಡಪ್ರಭ’ದ ಮುಖಪಟ ವರಧಿ; ”ಬಿಬಿಎಂಪಿ ಫಲಿತಾಂಶ ಈಗ ಅತಂತ್ರ, ಮರು ಚುನಾವಣೆ? ಮತಯಂತ್ರ ಹಾನಿ,ದತ್ತಾಂಶ ನಾಶ?” ಎಂದು ಹೊಡೆದು ಮಲಗಿಸಿದೆ.

ಇವರೆಲ್ಲಾ ಯಾರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದಾರೆ? ಇವರಿಗೆಲ್ಲಾ ಅದೇ ಕೆಲಸವಾಗಿರಬಹುದು. ಆದರೆ ವೀಕ್ಷಕರಿಗಲ್ಲ; ಓದುಗರಿಗಲ್ಲ. ಅವರ ಸಮಯ ಅಮೂಲ್ಯವಾದುದು. ಹಾಗಾಗಿ ಜವಾಬ್ದಾರಿ ಸ್ಥಾನದಲ್ಲಿರುವವರು ಏಪ್ರಿಲ್ ಫೂಲ್ ಮಾಡಲು ಹೊರಟರೆ ಅವರ ಬಗ್ಗೆ ಮರುಕ ಹುಟ್ಟುತ್ತದೆ

ಮುತಾಲಿಕ್ ಮುಖಕ್ಕೆ ಮಸಿ, ಅವಮಾನ ಆಗಿದ್ದು ಯಾರಿಗೆ?

ಇಂದು ದ.ಕ ಜಿಲ್ಲೆಯ ಪುತ್ತೂರಿನಲ್ಲಿ ಕೆಲ ಕಿಡಿಗೇಡಿಗಳು ಗಾಂದೀಜಿಯ ಪ್ರತಿಮೆಗೆ ಚಪ್ಪಲಿಯ ಹಾರ ಹಾಕಿ ಅವಮಾನಿಸಿದರು.
ಮೊನ್ನೆ ಶುಕ್ರವಾರ ಮುತಾಲಿಕ್ ಮುಖಕ್ಕೆ ಮಸಿ ಬಳಿದ ಮರುದಿನ ಗದಗ ಹೊತ್ತಿ ಉರಿಯಿತು. ಸಹಕಾರಿ ಧುರಿಣ, ಮಾಜಿ ಸಚಿವ, ಹುಲಿಕೋಟೆಯ ಹುಲಿ ಎಂದೇ ಪ್ರಖ್ಯಾತರಾದ ದಿ. ಕೆ. ಎಚ್. ಪಾಟೀಲ್ ಪುತ್ಥಳಿಗೆ ಚಪ್ಪಲಿಯ ಹಾರ ಹಾಕಿ ಅವಮಾನಿಸಲಾಯ್ತು.

ಹಾಗೆಂದು ನಾವು ಬರೆಯುತ್ತೇವೆ. ಆದರೆ ಅವಮಾನ ಆಗಿದ್ದು ಯಾರಿಗೆ?

ವ್ಯಾಲೆಂಟೈನ್ ಡೇ ಪ್ರಯುಕ್ತ ಖಾಸಗಿ ಚಾನಲ್ಲೊಂದು ಭಾನುವಾರ ಪ್ರಸಾರ ಮಾಡಲೆಂದು ಗುರುವಾರ ’ಪ್ರೇಮ ಯುದ್ಧ’ ಎಂಬ ಕಾರ್ಯಕ್ರಮವನ್ನು ಸಂಸ ಬಯಲು ರಂಗಮಂದಿರದಲ್ಲಿ ಚಿತ್ರಿಕರಿಸಿಕೊಳ್ಳುತ್ತಿತ್ತು. ಅಹ್ವಾನಿತ ಪ್ರೇಕ್ಷಕರ ನಡುವೆ ಖಾಸಗಿಯಾಗಿ ಏರ್ಪಡಿಸಿದ ಸಂವಾದ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ಸಂಘಟನೆಯ ಅಧ್ಯಕ್ಷ ಮುತಾಲಿಕ್ ಮುಖಕ್ಕೆ ಕೆಲ ಕಿಡಿಗೇಡಿಗಳು ಮಸಿ ಬಳೆದರು. ವೇದಿಕೆ ಮೇಲಿದ್ದ ಇತರ ಗಣ್ಯ ಅಥಿತಿಗಳಾಗಿದ್ದ ಜನವಾದಿ ಸಂಘಟನೆಯ ವಿಮಲ, ಅಗ್ನಿ ಪತ್ರಿಕೆಯ ಶ್ರೀಧರ್, ಹಿಂದು ಸಂಘಟನೆಯ ಗಿರಿಧರ್ ಈ ಘಟನೆಗೆ ಸಾಕ್ಷಿಯಾದರು. ತಮ್ಮ ಗಣ್ಯ ಅಥಿತಿಯನ್ನು ರಕ್ಷಿಸಿಕೊಳ್ಳಬೇಕಾದ ಚಾನಲ್ ಸಿಬ್ಬಂದಿ ಮೂಕ ಪ್ರೇಕ್ಷಕರಾಗಿದ್ದರು.

ಇಲ್ಲಿ ಯಾರು ಯಾರಿಗೆ ಮಸಿ ಬಳೆದರು? ಯಾರಿಗೆ ಅವಮಾನವಾಯ್ತು? ಕರ್ನಾಟಕದ ಕೆಲವು ಭಾಗಕ್ಕೆ ಕಿಚ್ಚು ಹತ್ತಿಸಿದವರು ಯಾರು?

ಮರುದಿನ ಆಂಧ್ರಪ್ರದೇಶದ ಶ್ರೀರಾಮಸೇನೆಯ ಸಭೆಯಲ್ಲಿ ಬಾಗವಹಿಸಿ ಬೆಳಗಾವಿಗೆ ಬಂದ ಮುತಾಲಿಕ್ ಅಲ್ಲಿ ಒಂದು ಮಾತು ಹೇಳಿದರು. ‘ಚಾನಲ್ ಗಳ ಗ್ಯಾಂಗ್ ವಾರ್ ನಲ್ಲಿ ನಾನು ಸಿಕ್ಕಿ ಹಾಕಿಕೊಂಡೆ. ಈ ಘಟನೆಯಲ್ಲಿ ಕಾಂಗ್ರೇಸ್ ಮತ್ತು ಮೀಡಿಯಾ ಇನ್ವಾಲ್ ಆಗಿದೆ.’ ಈ ಸುದ್ದಿ ಎಲ್ಲಿಯೂ ಪ್ರಸಾರವಾಗಲಿಲ್ಲ; ಪ್ರಕಟವಾಗಲಿಲ್ಲ. ನಾನು ಇಂಟ್ರನೆಟ್ ನಲ್ಲಿಅದನ್ನು ಓದಿದೆ. ಪಾಪ ಮುತಾಲಿಕ್!

ಸ್ವತಃ ನಗರ ಪೋಲಿಸ್ ಆಯುಕ್ತರಾದ ಶಂಕರ ಬಿದರಿ ಪತ್ರಿಕಾಗೋಷ್ಠಿಯಲ್ಲಿ, "ಘಟನೆಯು ಪೂರ್ವನಿಯೋಜಿತವಾಗಿದ್ದು ಇದರ ಹಿಂದೆ ಬಲವಾದ ಶಕ್ತಿಯ ಕೈವಾಡವಿದೆ. ಮುತಾಲಿಕ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಅವರಿಗೆ ಮಸಿ ಬಳಿಯಬೇಕೆಂದು ಪೂರ್ವತಯಾರಿ ನಡೆಸಿಯೇ ಈ ಕೃತ್ಯವೆಸಗಲಾಗಿದೆ.” ಎಂದು ಹೇಳಿದ್ದಾರೆ. ಜೊತೆಗೆ ಇಂತಹ ಘಟನೆಯೇನಾದರು ನಡೆಯಬಹುದೆಂದು ಬೇರೆ ಚಾನಲ್ ನವರಿಗೆ ಗೊತ್ತಿತ್ತು. ಅವರಿಗೂ ಸಾಮಾಜಿಕ ಹೊಣೆಗಾರಿಕೆಯಿದೆ. ಪೋಲಿಸಿನವರಿಗೆ ಅದನ್ನು ತಿಳಿಸಬೇಕಾಗಿತ್ತು ಎಂದಿದ್ದಾರೆ.

ಅಂದರೆ ಪತ್ರಕರ್ತರು ತಮ್ಮ ಪತ್ರಿಕಾ ಧರ್ಮ ಮರೆತು ತಮ್ಮ ಸೋರ್ಸ್ ಅನ್ನು ಅವರಿಗೆ ಹೇಳಬೇಕು. ಅದೆಂದಾದರೂ ಸಾಧ್ಯವೇ? ಸಾಮಾಜಿಕ ಹೊಣೆಗಾರಿಕೆ ಎಂದಿದ್ದಾರೆ ಬಿದರಿ ಸಾಹೇಬರು. ಒಪ್ಪತಕ್ಕ ಮಾತೇ. ಆದರೆ ಅದನ್ನು ಎಲ್ಲಿಂದ ಹುಡುಕಿ ತರೋಣ? ಶಾಸನವನ್ನು ರೂಪಿಸುವ ಪ್ರಭುಗಳಿಂದಲೇ? ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಮಾಧ್ಯಮದಿಂದಲೇ?

ಕಳೆದ ವರ್ಷ ಜನವರಿ ೨೪ರಂದು ಮಂಗಳೂರಿನಲ್ಲಿ ಪಬ್ ಮೇಲೆ ಶ್ರೀರಾಮ ಸೇನೆ ದಾಳಿ ನಡೆಸಿತು. ದಾಳಿ ಸಮಯದಲ್ಲಿ ಜೊತೆಯಲ್ಲಿ ಮಾಧ್ಯಮದವರನ್ನೂ ಸೇನೆ ಕರೆದೊಯ್ದಿತ್ತು. ಹಿಂದಿನ ಲೋಕಾಯುಕ್ತರಂತೆ. ಶ್ರೀರಾಮಸೇನೆಗೆ ಬಿಟ್ಟಿ ಪ್ರಚಾರ ಸಿಕ್ಕಿತು. ಅವರು ಹುಡುಗಿಯರನ್ನು ಅಟ್ಟಾಡಿಸಿಕೊಂಡು ಹೊಡೆಯುವುದನ್ನು ದೃಶ್ಯ ಮಾಧ್ಯಮಗಳು ಪದೇ ಪದೇ ಪ್ರಸಾರ ಮಾಡಿದವು.
ಪಬ್ ದಾಳಿಯ ಸಂದರ್ಭದಲ್ಲಿ ಅರೆಸ್ಟ್ ಆಗಿದ್ದ ಶ್ರೀರಾಮ ಸೇನೆಯ ರಾಜ್ಯ ಸಹಸಂಚಾಲಕನಾದ ಪ್ರಸಾದ್ ಅತ್ತಾವರ ಹೊರಬಂದೊಡನೆ ಎರಡೂ ಕೈಜೋಡಿಸಿ ಮಾಧ್ಯಮದವರಿಗೆ ಕೃತಜ್ನತೆಗಳನ್ನು ಅರ್ಪಿಸಿದ್ದು ಹೀಗೆ; ಇಲ್ಲಿಯವರೆಗೆ ಸೇನೆ ಬರೀ ಕರ್ನಾಟಕದಲ್ಲಿತ್ತು. ಈಗ ಅದು ರಾಷ್ಟ್ರ ಮಟ್ಟಕ್ಕೆ ಬೆಳೆಯಿತು. ಪ್ರಚಾರ ಕೊಟ್ಟ ನಿಮಗೆಲ್ಲಾ ಧನ್ಯವಾದಗಳು.
ಈಗ ಮುತಾಲಿಕರೊಂದಿಗೆ ಜನವಾದಿ ಸಂಘಟನೆಯ ವಿಮಲ ಕೂಡಾ ಧನ್ಯವಾದಗಳನ್ನರ್ಪಿಸಬಹುದು.

ಇದನ್ನೆಲ್ಲಾ ಆಳುವ ಅರಸರ ನಿರ್ವೀರ್ಯತೆಯೆನ್ನಬೇಕೋ? ಅಥವಾ ಮಾಧ್ಯಮಗಳ ಬೇಜವಬ್ದಾರಿಯೆನ್ನಬೇಕಾ? ಇಲ್ಲವೆ ಮತಾಂಧ ಶಕ್ತಿಗಳ ವಿಜೃಂಭಣೆಯೆನ್ನಬೇಕಾ?