ಇವತ್ತಿನ ’ವಿಜಯ ಕರ್ನಾಟಕ’ ದಿನಪತ್ರಿಕೆಯ ಎರಡನೆಯ ಸಂಪಾದಕೀಯ ಹೀಗಿದೆ;
ಸುಖೋಯ್ ಶೋಕಿ!
” ರಾಷ್ಟ್ರಪತಿ ಹುದ್ದೆ ರಬ್ಬರ್ ಸ್ಟಾಂಪ್ ಎಂಬುದು ನಿಜವಾದರೂ ಕ್ರಿಯಾಶೀಲತೆಯನ್ನೇ ಕಳೆದುಕೊಳ್ಳಬೇಕು ಎಂದು ಅರ್ಥವಲ್ಲ. ಆದರೆ ಆ ಹುದ್ದೆಯಲ್ಲಿರುವವರು ಅರ್ಥಹೀನ ಶೋಖಿ ಮಾಡಿಕೊಂಡಿರಬೇಕು ಹಾಗೂ ಆ ಮೂಲಕವೇ ತಮ್ಮ ಅಸ್ತಿತ್ವ ತೋರಿಸಬೇಕು ಎಂಬ ರೂಢಿ ಬೆಳೆದುಬಿಟ್ಟರೆ ಹೇಗೆ? ರಾಷ್ಟ್ರಪತಿ ಪ್ರತಿಭಾಪಾಟೀಲ್ ಅವರು ಸುಖೋಯಿ ಯುದ್ದ ವಿಮಾನದಲ್ಲಿ ಸುಯ್ಯನೆ ಹಾರಿ, ಯುದ್ಧ ವಿಮಾನ ಚಲಾಯಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಲ್ಲಿ, ಮಾಧ್ಯಮಗಳ ಕೆಮರಾ ಎದುರು ಮಿಂಚಿದ್ದು ಬಿಟ್ಟರೆ ಮತ್ತೆ ಯಾವ ಉದ್ದೇಶ ಈಡೇರಿದಂತಾಯ್ತು? ಕಲಾಂ ಅವರೂ ಈ ಹಿಂದೆ ಸುಖೋಯ್ ನಲ್ಲಿ ಪಯಣಿಸಿದ್ದರು. ಆದರೆ, ಅವರು ದೇಶದ ಉದ್ದಗಲಕ್ಕೂ ಪಯಣಿಸಿ, ವಿದ್ಯಾರ್ಥಿಗಳಲ್ಲಿ ನವಚೈತನ್ಯ ತುಂಬುತ್ತಾ ಕಾಳಜಿ ಮೆರೆದಿದ್ದರು. ಎಂಬುದೂ ಗಮನಾರ್ಹ. ಜಾರ್ಜ್ ಫರ್ನಾಂಡಿಸ್ ಅವರು ’ಹಾರಾಡುವ ಶವಪೆಟ್ಟಿಗೆ’ ಎಂದು ಕರೆಸಿಕೊಳ್ಳುತ್ತಿದ್ದ ಮಿಗ್ ವಿಮಾನದಲ್ಲಿ ಹಾರಾಡಿದ್ದಕ್ಕೆ ಒಂದು ಅರ್ಥವಿತ್ತು. ಈಗ ಪ್ರತಿಭಾ ಹಾರಾಡಿರುವುದರಿಂದ ಸುಖೋಯಿ ವಿಮಾನಗಳ ಸುರಕ್ಷತೆಗೆ ಖಾತ್ರಿ ಸಿಕ್ಕಿದೆ ಅಂತ ಪೋಸು ಕೊಡುತ್ತಿರುವುದು ಪ್ರಚಾರಪ್ರಿಯತೆ ಅಲ್ಲದೇ ಇನ್ನೇನ್ರಿ?”
ಇದನ್ನು ಬರೆದಾತನ ಯೋಗ್ಯತೆಯನ್ನು ನಿರ್ಧರಿಸಲು ಆತ ಸಂಪಾದಕೀಯವನ್ನು ಮುಕ್ತಾಯಗೊಳಿಸಿದ ’ಇನ್ನೇನ್ರೀ?’ ಎಂಬ ಒಂದು ಶಬ್ದವೇ ಸಾಕು. ಬೀದಿಯಲ್ಲಿ ನಿಂತು ಜಗಳವಾಡುವ, ಸಿಡುಕು ಪ್ರವೃತ್ತಿಯ, ಉಡಾಫೆ ವ್ಯಕ್ತಿತ್ವದವ ಮಾತ್ರ ಇಂತಹ ಶಬ್ದ ಉಪಯೋಗಿಸಬಲ್ಲ. ಬಹುಶಃ ಆತ ಟ್ರೈನಿ ಪತ್ರಕರ್ತನಾಗಿರಬಹುದು!
ಮಹಿಳೆಯರನ್ನು ಅವಮಾನ ಮಾಡುವ, ತಾತ್ಸಾರ ಮಾಡುವ ಉದ್ದೇಶದಿಂದಲೇ ಇದನ್ನಾತ ಬರೆದಿರಬೇಕು. ದಿನಪತ್ರಿಕೆಯೊಂದರ ಎರಡನೇ ಸಂಪಾದಕೀಯ ಸಾಮಾನ್ಯವಾಗಿ ವೈನೋಧಿಕ ಬರಹಕ್ಕೆ ಸಂಬಂಧಪಟ್ಟದ್ದಾಗಿರುತ್ತದೆ. ಬಹು ಹಿಂದೆ ಪ್ರಜಾವಾಣಿಯಲ್ಲಿ ನಾಗೇಶ ಹೆಗ್ಡೆಯವರು ಇದನ್ನು ಬರೆಯುತ್ತಿದ್ದರು. ನಾನದನ್ನು ಇಷ್ಟಪಟ್ಟು ಓದುತ್ತಿದ್ದೆ. ಈಗ ಅಲ್ಲಿ ಎರಡನೆಯ ಸಂಪಾದಕಿಯವೂ ಗಂಭೀರವಾದುದೇ. ಆದರೆ ವಿಜಯ ಕರ್ನಾಟಕದಲ್ಲಿ ಅದು ಕೀಳು ಅಭಿರುಚಿಗೆ ಕನ್ನಡಿಹಿಡಿಯುತ್ತದೆ. ನಿನ್ನೆ ಈ ಕಾಲಂನಲ್ಲಿ ಕಾಣಿಸಿಕೊಂಡವರು ಶೋಭಾ ಕರಂದ್ಲಾಜೆ ಮತ್ತು ಭಾರತಿ ಶೆಟ್ಟಿ. ಅದರ ಹೆಡ್ಡಿಂಗ್ ”ನಾಯಕಿಯರು ಕಣ್ಣೀರು ಹಾಕಬಾರದು”. ಇಂದು ಅದಕ್ಕೆ ಬಲಿಯಾದವರು ನಮ್ಮ ಘನತೆವೆತ್ತ ರಾಷ್ಟ್ರಪತಿ, ಪ್ರಥಮ ಪ್ರಜೆ ಶ್ರೀಮತಿ ಪ್ರತಿಭಾ ಪಾಟೀಲ್ ಅವರು. ನಿನ್ನೆಯೇ ಅವರ ತೇಜೋವಧೆಗೆ ಪೂರ್ವತಯಾರಿ ನಡೆದಿರಬೇಕು. ಏಕೆಂದರೆ ಇಂದಿನ ಸುಖೋಯಿ ಹಾರಾಟದ ಬಗ್ಗೆ ನಿನ್ನೆಯ ವಿ.ಕ.ದಲ್ಲಿ ಒಂದು ಬರಹ ಪ್ರಕಟವಾಗಿತ್ತು. ಅದರ ಹೆಡ್ಡಿಂಗ್ ”ಸುಖೋಯಿ ಹಾರಾಟ ಪ್ರತಿಭಾ ಹೊಸ ಅವತಾರ.”
ವಿಜಯ ಕರ್ನಾಟಕದಲ್ಲಿ ಶಬ್ದಗಳನ್ನು ಬೇಕಾಬಿಟ್ಟಿಯಾಗಿ ಬಳಸುತ್ತಾರೆ. ’ಅವತಾರ’ ಎನ್ನುವುದು ಹೀನಾರ್ಥವನ್ನು ನೀಡುತ್ತದೆ. ಉನ್ನತ ಸ್ಥಾನದಿಂದ ಕೆಳಜಾರುವುದೆಂದಾಗುತ್ತದೆ. ಅಡುಮಾತನ್ನು ಗಮನಿಸಿ; ”ಅವನ ಅವತಾರ ನೋಡು” ಶೋಕಿ ಕೂಡಾ ಹಾಗೆಯೇ. ಗಮನಿಸಿ; ಶೋಕಿಲಾಲ. ವಿ.ಕ. ಉಡಾಫೆ ಪತ್ರಕರ್ತರನ್ನು ಬೆಳೆಸುತ್ತಿದೆ; ಪೋಷಿಸುತ್ತಿದೆ. ಅದಕ್ಕೆ ಅದುವೇ ಸರಿಬಿಡಿ. ವಿಮರ್ಶಕಿ ವಿ.ಕೆಯ ಅವತಾರ ಕಂಡು ತನ್ನ ಬ್ಲಾಗಿನಲ್ಲಿ ಬರೆದುಕೊಂಡಿದ್ದಾಳೆ; ವಿ.ಕ. ಈಗ ನೋಡುವ ಪತ್ರಿಕೆ-ಓದುವ ಪತ್ರಿಕೆ ಅಲ್ಲ. ಪತ್ರಿಕೋಧ್ಯಮದ ಗಾಂಭೀರ್ಯವನ್ನೇ ಅದು ಮಸುಕುಗೊಳಿಸುತ್ತಿದೆ.
ಸಂಪಾದಕೀಯ ಬರೆದಾತನಿಗೆ ಗೊತ್ತಿಲ್ಲದಿರಬಹುದು; ಭೂ, ವಾಯು, ನೌಕಾದಳಗಳಿಗೆ ಪ್ರತ್ಯೇಕ ದಂಡನಾಯಕರಿರುತ್ತಾರೆ. ರಾಷ್ಟ್ರಪತಿಗಳು ಈ ಮೂರೂ ದಳಗಳಿಗೆ ಮಾಹಾದಂಡನಾಯಕರು. ಸುಖೋಯಿಯಲ್ಲಿ ಹಾರಾಟ ನಡೆಸುವುದು ಅವರ ಹಕ್ಕು. ದೇಶದ ಅತ್ಯುನ್ನತ ಸ್ಥಾನದಲ್ಲಿರುವ, ೭೪ ವಯಸ್ಸಿನ ಮಹಿಳೆಯೊಬ್ಬರ ಆತ್ಮಸ್ಥೈರವನ್ನು ನಾವು ಅಚ್ಚರಿಯಿಂದ, ಹೆಮ್ಮೆಯಿಂದ ನೋಡಬೇಕು. ಅಸ್ವಸ್ಥ ಮನಸ್ಸು ಮಾತ್ರ ಅದನ್ನು ತೆವಲು ಎಂಬಾರ್ಥದಲ್ಲಿ ’ಶೋಕಿ’ ಎಂದು ಕರೆಯಬಲ್ಲುದು. ಯುದ್ಧ ವಿಮಾನದಲ್ಲಿ ಹಾರಾಡುವುದಕ್ಕೆ ಗಟ್ಟಿ ಗುಂಡಿಗೆ ಬೇಕು. ಎಳಸು ಸಂಪಾದಕೀಯ ಬರೆದ ಹಾಗಲ್ಲ.
ಸಂಪಾದಕೀಯ ಎಂಬುದು ಒಂದು ಪತ್ರಿಕೆಯ ಗೊತ್ತು ಗುರಿಗಳನ್ನು ಹೇಳುತ್ತೆ; ಅದರ ಸಾಮಾಜಿಕ ನಿಲುವನ್ನು ಸ್ಪಷ್ಟಪಡಿಸುತ್ತೆ. ಸಂಪಾದಕೀಯ ಪುಟದಲ್ಲಿ ಬರುವ ಲೇಖನಗಳು ಇದಕ್ಕೆ ಪುಷ್ಟಿನೀಡುತ್ತವೆ. ಇದನ್ನೆಲ್ಲಾ ಗಮನಿಸಿಯೇ ಯಾರೋ ವಿ.ಕ.ವನ್ನು ’ಬಿಜೆಪಿಯ ಪಂಚಾಂಗ’ ಎಂದು ಕರೆದಿದ್ದಾರೆ.ಬಿಜೆಪಿಯ ಪುರುಷ ಮನಸ್ಸು ಮಹಿಳೆಯನ್ನು ಖಾಸಾಗಿ ಆಸ್ತಿ ಎಂದು ಪರಿಗಣಿಸುತ್ತದೆ. ಅದು ಸದಾ ಸ್ತ್ರೀಯರನ್ನು ಅಂಕೆಯಲ್ಲಿಟ್ಟುಕೊಳ್ಳಬಯಸುತ್ತದೆ. ಸಾಧ್ಯವಾದಲೆಲ್ಲ ಅವರ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಅದಕ್ಕೆ ರಾಷ್ಟ್ರಪತಿಗಳೂ ಹೊರತಾಗಲಿಲ್ಲವಲ್ಲ ಎಂಬುದೇ ನೋವಿನ ಸಂಗತಿ.
ರಾಷ್ಟ್ರಪತಿಗಳನ್ನು ಕೇವಲ ಮಹಿಳೆಯಾಗಿ ಕಂಡ ವಿ.ಕ.
Posted by
Nishada Kanjari
on Thursday, November 26, 2009
/
Comments: (1)