Visitors

ಮುತಾಲಿಕ್ ಮುಖಕ್ಕೆ ಮಸಿ, ಅವಮಾನ ಆಗಿದ್ದು ಯಾರಿಗೆ?

ಇಂದು ದ.ಕ ಜಿಲ್ಲೆಯ ಪುತ್ತೂರಿನಲ್ಲಿ ಕೆಲ ಕಿಡಿಗೇಡಿಗಳು ಗಾಂದೀಜಿಯ ಪ್ರತಿಮೆಗೆ ಚಪ್ಪಲಿಯ ಹಾರ ಹಾಕಿ ಅವಮಾನಿಸಿದರು.
ಮೊನ್ನೆ ಶುಕ್ರವಾರ ಮುತಾಲಿಕ್ ಮುಖಕ್ಕೆ ಮಸಿ ಬಳಿದ ಮರುದಿನ ಗದಗ ಹೊತ್ತಿ ಉರಿಯಿತು. ಸಹಕಾರಿ ಧುರಿಣ, ಮಾಜಿ ಸಚಿವ, ಹುಲಿಕೋಟೆಯ ಹುಲಿ ಎಂದೇ ಪ್ರಖ್ಯಾತರಾದ ದಿ. ಕೆ. ಎಚ್. ಪಾಟೀಲ್ ಪುತ್ಥಳಿಗೆ ಚಪ್ಪಲಿಯ ಹಾರ ಹಾಕಿ ಅವಮಾನಿಸಲಾಯ್ತು.

ಹಾಗೆಂದು ನಾವು ಬರೆಯುತ್ತೇವೆ. ಆದರೆ ಅವಮಾನ ಆಗಿದ್ದು ಯಾರಿಗೆ?

ವ್ಯಾಲೆಂಟೈನ್ ಡೇ ಪ್ರಯುಕ್ತ ಖಾಸಗಿ ಚಾನಲ್ಲೊಂದು ಭಾನುವಾರ ಪ್ರಸಾರ ಮಾಡಲೆಂದು ಗುರುವಾರ ’ಪ್ರೇಮ ಯುದ್ಧ’ ಎಂಬ ಕಾರ್ಯಕ್ರಮವನ್ನು ಸಂಸ ಬಯಲು ರಂಗಮಂದಿರದಲ್ಲಿ ಚಿತ್ರಿಕರಿಸಿಕೊಳ್ಳುತ್ತಿತ್ತು. ಅಹ್ವಾನಿತ ಪ್ರೇಕ್ಷಕರ ನಡುವೆ ಖಾಸಗಿಯಾಗಿ ಏರ್ಪಡಿಸಿದ ಸಂವಾದ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ಸಂಘಟನೆಯ ಅಧ್ಯಕ್ಷ ಮುತಾಲಿಕ್ ಮುಖಕ್ಕೆ ಕೆಲ ಕಿಡಿಗೇಡಿಗಳು ಮಸಿ ಬಳೆದರು. ವೇದಿಕೆ ಮೇಲಿದ್ದ ಇತರ ಗಣ್ಯ ಅಥಿತಿಗಳಾಗಿದ್ದ ಜನವಾದಿ ಸಂಘಟನೆಯ ವಿಮಲ, ಅಗ್ನಿ ಪತ್ರಿಕೆಯ ಶ್ರೀಧರ್, ಹಿಂದು ಸಂಘಟನೆಯ ಗಿರಿಧರ್ ಈ ಘಟನೆಗೆ ಸಾಕ್ಷಿಯಾದರು. ತಮ್ಮ ಗಣ್ಯ ಅಥಿತಿಯನ್ನು ರಕ್ಷಿಸಿಕೊಳ್ಳಬೇಕಾದ ಚಾನಲ್ ಸಿಬ್ಬಂದಿ ಮೂಕ ಪ್ರೇಕ್ಷಕರಾಗಿದ್ದರು.

ಇಲ್ಲಿ ಯಾರು ಯಾರಿಗೆ ಮಸಿ ಬಳೆದರು? ಯಾರಿಗೆ ಅವಮಾನವಾಯ್ತು? ಕರ್ನಾಟಕದ ಕೆಲವು ಭಾಗಕ್ಕೆ ಕಿಚ್ಚು ಹತ್ತಿಸಿದವರು ಯಾರು?

ಮರುದಿನ ಆಂಧ್ರಪ್ರದೇಶದ ಶ್ರೀರಾಮಸೇನೆಯ ಸಭೆಯಲ್ಲಿ ಬಾಗವಹಿಸಿ ಬೆಳಗಾವಿಗೆ ಬಂದ ಮುತಾಲಿಕ್ ಅಲ್ಲಿ ಒಂದು ಮಾತು ಹೇಳಿದರು. ‘ಚಾನಲ್ ಗಳ ಗ್ಯಾಂಗ್ ವಾರ್ ನಲ್ಲಿ ನಾನು ಸಿಕ್ಕಿ ಹಾಕಿಕೊಂಡೆ. ಈ ಘಟನೆಯಲ್ಲಿ ಕಾಂಗ್ರೇಸ್ ಮತ್ತು ಮೀಡಿಯಾ ಇನ್ವಾಲ್ ಆಗಿದೆ.’ ಈ ಸುದ್ದಿ ಎಲ್ಲಿಯೂ ಪ್ರಸಾರವಾಗಲಿಲ್ಲ; ಪ್ರಕಟವಾಗಲಿಲ್ಲ. ನಾನು ಇಂಟ್ರನೆಟ್ ನಲ್ಲಿಅದನ್ನು ಓದಿದೆ. ಪಾಪ ಮುತಾಲಿಕ್!

ಸ್ವತಃ ನಗರ ಪೋಲಿಸ್ ಆಯುಕ್ತರಾದ ಶಂಕರ ಬಿದರಿ ಪತ್ರಿಕಾಗೋಷ್ಠಿಯಲ್ಲಿ, "ಘಟನೆಯು ಪೂರ್ವನಿಯೋಜಿತವಾಗಿದ್ದು ಇದರ ಹಿಂದೆ ಬಲವಾದ ಶಕ್ತಿಯ ಕೈವಾಡವಿದೆ. ಮುತಾಲಿಕ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಅವರಿಗೆ ಮಸಿ ಬಳಿಯಬೇಕೆಂದು ಪೂರ್ವತಯಾರಿ ನಡೆಸಿಯೇ ಈ ಕೃತ್ಯವೆಸಗಲಾಗಿದೆ.” ಎಂದು ಹೇಳಿದ್ದಾರೆ. ಜೊತೆಗೆ ಇಂತಹ ಘಟನೆಯೇನಾದರು ನಡೆಯಬಹುದೆಂದು ಬೇರೆ ಚಾನಲ್ ನವರಿಗೆ ಗೊತ್ತಿತ್ತು. ಅವರಿಗೂ ಸಾಮಾಜಿಕ ಹೊಣೆಗಾರಿಕೆಯಿದೆ. ಪೋಲಿಸಿನವರಿಗೆ ಅದನ್ನು ತಿಳಿಸಬೇಕಾಗಿತ್ತು ಎಂದಿದ್ದಾರೆ.

ಅಂದರೆ ಪತ್ರಕರ್ತರು ತಮ್ಮ ಪತ್ರಿಕಾ ಧರ್ಮ ಮರೆತು ತಮ್ಮ ಸೋರ್ಸ್ ಅನ್ನು ಅವರಿಗೆ ಹೇಳಬೇಕು. ಅದೆಂದಾದರೂ ಸಾಧ್ಯವೇ? ಸಾಮಾಜಿಕ ಹೊಣೆಗಾರಿಕೆ ಎಂದಿದ್ದಾರೆ ಬಿದರಿ ಸಾಹೇಬರು. ಒಪ್ಪತಕ್ಕ ಮಾತೇ. ಆದರೆ ಅದನ್ನು ಎಲ್ಲಿಂದ ಹುಡುಕಿ ತರೋಣ? ಶಾಸನವನ್ನು ರೂಪಿಸುವ ಪ್ರಭುಗಳಿಂದಲೇ? ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಮಾಧ್ಯಮದಿಂದಲೇ?

ಕಳೆದ ವರ್ಷ ಜನವರಿ ೨೪ರಂದು ಮಂಗಳೂರಿನಲ್ಲಿ ಪಬ್ ಮೇಲೆ ಶ್ರೀರಾಮ ಸೇನೆ ದಾಳಿ ನಡೆಸಿತು. ದಾಳಿ ಸಮಯದಲ್ಲಿ ಜೊತೆಯಲ್ಲಿ ಮಾಧ್ಯಮದವರನ್ನೂ ಸೇನೆ ಕರೆದೊಯ್ದಿತ್ತು. ಹಿಂದಿನ ಲೋಕಾಯುಕ್ತರಂತೆ. ಶ್ರೀರಾಮಸೇನೆಗೆ ಬಿಟ್ಟಿ ಪ್ರಚಾರ ಸಿಕ್ಕಿತು. ಅವರು ಹುಡುಗಿಯರನ್ನು ಅಟ್ಟಾಡಿಸಿಕೊಂಡು ಹೊಡೆಯುವುದನ್ನು ದೃಶ್ಯ ಮಾಧ್ಯಮಗಳು ಪದೇ ಪದೇ ಪ್ರಸಾರ ಮಾಡಿದವು.
ಪಬ್ ದಾಳಿಯ ಸಂದರ್ಭದಲ್ಲಿ ಅರೆಸ್ಟ್ ಆಗಿದ್ದ ಶ್ರೀರಾಮ ಸೇನೆಯ ರಾಜ್ಯ ಸಹಸಂಚಾಲಕನಾದ ಪ್ರಸಾದ್ ಅತ್ತಾವರ ಹೊರಬಂದೊಡನೆ ಎರಡೂ ಕೈಜೋಡಿಸಿ ಮಾಧ್ಯಮದವರಿಗೆ ಕೃತಜ್ನತೆಗಳನ್ನು ಅರ್ಪಿಸಿದ್ದು ಹೀಗೆ; ಇಲ್ಲಿಯವರೆಗೆ ಸೇನೆ ಬರೀ ಕರ್ನಾಟಕದಲ್ಲಿತ್ತು. ಈಗ ಅದು ರಾಷ್ಟ್ರ ಮಟ್ಟಕ್ಕೆ ಬೆಳೆಯಿತು. ಪ್ರಚಾರ ಕೊಟ್ಟ ನಿಮಗೆಲ್ಲಾ ಧನ್ಯವಾದಗಳು.
ಈಗ ಮುತಾಲಿಕರೊಂದಿಗೆ ಜನವಾದಿ ಸಂಘಟನೆಯ ವಿಮಲ ಕೂಡಾ ಧನ್ಯವಾದಗಳನ್ನರ್ಪಿಸಬಹುದು.

ಇದನ್ನೆಲ್ಲಾ ಆಳುವ ಅರಸರ ನಿರ್ವೀರ್ಯತೆಯೆನ್ನಬೇಕೋ? ಅಥವಾ ಮಾಧ್ಯಮಗಳ ಬೇಜವಬ್ದಾರಿಯೆನ್ನಬೇಕಾ? ಇಲ್ಲವೆ ಮತಾಂಧ ಶಕ್ತಿಗಳ ವಿಜೃಂಭಣೆಯೆನ್ನಬೇಕಾ?