Visitors

ದೃಶ್ಯ ಮಾಧ್ಯಮವೆಂಬ ’ಅಗ್ನಿಗೋಳ’

ಪತ್ರಿಕೋದ್ಯಮ ಎಂಬುದು ಅದರ ಹೆಸರಲ್ಲೇ ಅಡಗಿರುವಂತೆ ಅದೊಂದು ಉಧ್ಯಮ. ಉಧ್ಯಮ ಅಂದ ಮೇಲೆ ಲಾಭ ನಷ್ಟದ ಲೆಕ್ಕಾಚಾರ ಇದ್ದದ್ದೇ. ಹಿಂದೆಲ್ಲಾ ಅದು ಎದ್ದು ಕಾಣುತ್ತಿರಲಿಲ್ಲ. ಅದನ್ನು ಸೇವಾಕ್ಶೇತ್ರವೇಂದೇ ಪರಿಗಣಿಸಲಾಗುತ್ತಿತ್ತು. ಅದು ನಿಜವೂ ಆಗಿತ್ತು. ಸಮಾಜದ ಬಗ್ಗೆ, ಸಾಮಾಜಿಕ ಬದಲಾವಣೆಯ ಬಗ್ಗೆ ಕನಸಿದ್ದವರು, ತುಡಿತವಿದ್ದವರು ಪತ್ರಕರ್ತರಾಗುತ್ತಿದ್ದರು. ಹಾಗಾಗಿ ಸಂಬಳ ನಗಣ್ಯವಾಗುತ್ತಿತ್ತು. ಬದುಕು ಹೇಗೋ ಸಾಗುತ್ತಿತ್ತು.

ಆದರೆ ಈಗ ಕಾಲ ಬದಲಾಗಿದೆ. ಮೌಲ್ಯಗಳೂ ಬದಲಾಗಿವೆ. ಪತ್ರಿಕೋಧ್ಯಮಕ್ಕೆ ಗ್ಲಾಮರ್ ಬಂದಿದೆ. ಈಗದು ಥಳುಕು ಬಳುಕಿನ ಲೋಕ. ಅಸ್ಖಲಿತವಾದ ಮಾತು, ವಯ್ಯಾರದ ನಡೆನುಡಿ, ಆಕರ್ಷಕ ವ್ಯಕ್ತಿತ್ವ, ಹದಿನೆಂಟರಿಂದ ೨೪ರೊಳಗಿನ ವಯೋಮಿತಿಯಿದ್ದರೆ ಯಾರು ಬೇಕಾದರೂ ದೃಶ್ಯ ಮಾಧ್ಯಮದಲ್ಲಿ ಪತ್ರಕರ್ತರಾಗಲು ಪ್ರಯತ್ನಿಸಬಹುದು; ತಲೆಯಲ್ಲಿ ಮಿದುಳಿಲ್ಲದಿದ್ದರೂ...! ಮುದ್ರಣ ಮಾಧ್ಯಮಕ್ಕೆ ಇಷ್ಟು ಸುಲಭದಲ್ಲಿ ಪ್ರವೇಶ ಸಾಧ್ಯವಿಲ್ಲ. ಅಲ್ಲಿ ಸಾಹಿತ್ಯ, ಕಲೆ, ಸಾಮಾನ್ಯ ಜ್ನಾನದ ಅರಿವಿನ ಜೊತೆ ಭಾಷೆಯ ಬಗ್ಗೆ ಹಿಡಿತವಿರಬೇಕು.

ಈಗಂತೂ ಪತ್ರಿಕೋಧ್ಯಮ ಸೇವಾಕ್ಶೇತ್ರವಲ್ಲ. ಹಾಗಾಗಿ ಸಾಪ್ಟ್ ವೇರ್ ಕ್ಶೇತ್ರದಲ್ಲಿ ಸಿಗುವಷ್ಟೇ, ಕೆಲವೊಮ್ಮೆ ಅದಕ್ಕಿಂತಲೂ ಜಾಸ್ತಿ ಸಂಬಳ ಸಿಗುತ್ತದೆ. ಸಿಗದವರು ಉಳಿದ ಕ್ಷೇತ್ರಗಳಂತೆ ಇಲ್ಲಿಯೂ ಗಿಂಬಳಕ್ಕಾಗಿ ಕೈಚಾಚುತ್ತಾರೆ. ರಾಜಕಾರಣಿಗಳ ಗುಟ್ಟು ಕಾಪಾಡುತ್ತಾರೆ; ಉಧ್ಯಮಿಗಳ ಹಿತ ಕಾಯುತ್ತಾರೆ. ಅಂತಹ ಪತ್ರಕರ್ತನೊಬ್ಬನ ಬಗ್ಗೆ ’ಅಗ್ನಿ’ ವಾರಪತ್ರಿಕೆ ಈ ವಾರ ಕವರ್ ಸ್ಟೋರಿ ಮಾಡಿದೆ.

’ಟಿವಿ೯ನಲ್ಲಿ ಕ್ರಿಮಿ ರೋಲ್ ಕಾಲ್ ರಾಘವೇಂದ್ರ’ ಎಂಬುದು ಅದರ ಹೆಡ್ಡಿಂಗ್. ಮಂಜುನಾಥ ಅದ್ದೆ ಬರೆದಿರುವ ಈ ಲೇಖನ ಸಮತೂಕವುಳ್ಳವಾದ ವರದಿಯಾಗಿದ್ದರೂ ’ಅಗ್ನಿ’ ಸಮತೂಕವುಳ್ಳ ಪತ್ರಿಕೆಯೇನಲ್ಲ. ಅವಕಾಶ ಸಿಕ್ಕಿದಾಗಲೆಲ್ಲ ಅಥವಾ ಅವಕಾಶ ಕಲ್ಪಿಸಿಕೊಂಡು ಬ್ರಾಹ್ಮಣರನ್ನು ಬಯ್ಯುವುದನ್ನು, ಶೂದ್ರರನ್ನು ಹೊಗಳುವುದನ್ನು ಅವರು ತಪ್ಪಿಸಿಕೊಳ್ಳುವುದಿಲ್ಲ.

’ಅಗ್ನಿ’ಯ ಝಳಕ್ಕೆ ಸಿಕ್ಕ ರಾಘವೇಂದ್ರನ ಶಿಷ್ಯರಲ್ಲಿ ಕೆಲವರು ಸುವರ್ಣನ್ಯೂಸ್ ಚಾನಲ್ ನತ್ತ ಇಣುಕಿ ನೋಡುತ್ತಿದ್ದಾರೆಂದು ನಿಷಾದಕ್ಕೆ ವರದಿಯಾಗಿದೆ. ಸುವರ್ಣದಲ್ಲಿ ಒಂದಷ್ಟು ಜನಕ್ಕೆ ಗೇಟ್ ಪಾಸ್ ನೀಡಲಾಗಿದೆ. ಇತ್ತೀಚೆಗೆ ಅಲ್ಲಿಂದ ಹೊರಬಂದವರಲ್ಲಿ ಚಾಮರಾಜ ಸವಡಿ ಒಬ್ಬರು. ಸಂವೇದನಾಶೀಲ ಬರಹಗಾರರಲ್ಲಿ ಒಬ್ಬರಾದ ಸವಡಿ ಪ್ರಿಂಟ್ ಮೀಡಿಯಾದಲ್ಲಿ ಪಳಗಿದವರು. ಜನಪರ ಕಾಳಜಿಯುಳ್ಳ ಯುವ ಬರಹಗಾರ. ಸಮಾಜವಾದಿ ಚಿಂತನೆಯ ಝಳಕ್ ಅವರ ಬರಹಗಳಲ್ಲಿದೆ. ಒಂಚೂರು ಸಹನೆ, ವಿವೇಚನೆ ಇರುತ್ತಿದ್ದರೆ ಅವರು ಪ್ರಜಾವಾಣಿಯನ್ನು ಬಿಡುವ ಪ್ರಮೇಯವೇ ಬರುತ್ತಿರಲಿಲ್ಲ.

ಪ್ರಿಂಟ್ ಮೀಡಿಯಾದಿಂದ ದೃಶ್ಯ ಮಾಧ್ಯಮಕ್ಕೆ ವಲಸೆ ಹೋಗುವವರ ಬಗ್ಗೆ ನನಗೆ ಅನುಕಂಪವಿದೆ. ಅದು ದೂರದ ಬೆಟ್ಟ. ಘಂಟೆಗಳ ಪರಿವೆಯಿಲ್ಲದೆ ಅಲ್ಲಿ ಕೆಲಸ ಮಾಡಬೇಕಾಗುತ್ತದೆ. ಸದಾ ಸ್ಪರ್ಧೆ. ಟಿಅರ್ ಪಿ ಮೇಲೆಯೇ ಕಣ್ಣು. ಮೊದಲು ಸುದ್ದಿ ಕೊಡುವ ಆತುರ. ಒತ್ತಡದ ಬದುಕು. ಕೆಲಸಕ್ಕೆ ಸೇರುವಾಗ ಕಳೆಕಳೆಯಾಗಿರುತ್ತಿದ್ದ ಹುಡುಗ-ಹುಡುಗಿಯರು ಬರಬರುತ್ತಾ ಪೇಲವರಾಗುತ್ತಾರೆ. ಕಸ್ತೂರಿ ಚಾನಲ್ಲಿನಲ್ಲಿ ಒಬ್ಬ ಹುಡುಗನಿದ್ದಾನೆ. ಹೆಸರು ನೆನಪಾಗುತ್ತಿಲ್ಲ. ನ್ಯೂಸ್ ರೀಡರ್. ಆತ ಹೊಸದಾಗಿ ಬಂದಾಗ ಅರಳುಗಣ್ಣುಗಳ ಮುಗ್ಧ ಸುಂದರಾಂಗ. ಈಗ ಮಂಗೋಲಿಯನ್ ಕಣ್ಣುಗಳ ಹ್ಯಾಪ್ ಮೋರೆಯ ಮಂಕಣ್ಣ.

ಮೊನ್ನೆ ಯಾರತ್ರನೋ ಮಾತಾಡ್ತಿದ್ದೆ. ಅವರೊಂದು ಸಂಗತಿ ಹೇಳಿದರು. ಸುದ್ದಿ ಚಾನಲ್ಲಿನಲ್ಲಿ ಹುಡುಗಿಯರು ಮನಸ್ಸಿಗೆ ಬಂದ ಟೈಮ್ ನಲ್ಲಿ ಗರ್ಭಿಣಿಯರಾಗಬಾರದಂತೆ. ಪರಸ್ಪರ ಮಾತಾಡಿಕೊಂಡು ಸರದಿ ಪ್ರಕಾರ ಬಸುರಿಯಾಗಬೇಕಂತೆ. ಹಾಗಂತ ಆಡಳಿತ ಮಂಡಳಿಯವರು ಕಿವಿ ಮಾತು ಹೇಳಿದ್ದಾರಂತೆ. ವೈಯಕ್ತಿಕ ಬದುಕು ಎಲ್ಲಿಗೆ ಬಂದು ನಿಂತಿದೆ ನೋಡಿ!

ಪ್ರಜಾವಾಣಿಯಂತ ಪತ್ರಿಕೆಯಿಂದ ವಲಸೆ ಹೋಗುವಾಗ ಎಚ್ಚರದಿಂದಿರಬೇಕು. ಕನ್ನಡ ಪತ್ರಿಕೋಧ್ಯಮಕ್ಕೆ ಅದು ಕೊನೆಯ ನಿಲ್ದಾಣ. ಅದೊಂಥರ ಸರಕಾರಿ ಆಪೀಸ್ ಇದ್ದ ಹಾಗೆ.ಅಲ್ಲಿ ಸೇರಿಕೊಳ್ಳುವುದು ಸ್ವಲ್ಪ ಕಷ್ಟ. ಒಮ್ಮೆ ಸೇರಿಕೊಂಡ ಮೇಲೆ ನಿವೃತ್ತಿಯವರೆಗೆ ಅಲ್ಲಿ ಕೆಲಸ ಮಾಡಬಹುದು. ಬರೆಯಲು ಬಾರದಿದ್ದರೂ ಕೆಲಸದಿಂದ ತೆಗೆದು ಹಾಕುವುದಿಲ್ಲ. ಹೆಚ್ಚೆಂದರೆ ಪ್ರಮೋಷನ್ ಕೊಡದಿರಬಹುದು. ಕೈ ತುಂಬಾ ಸಂಬಳ, ನಿಗದಿತ ಅವಧಿಯ ಕೆಲಸ, ಬೇಕೆನಿಸಿದಾಗ ರಜಾ ಸೌಲಬ್ಯ, ಕ್ಯಾಂಟಿನ್ ನಲ್ಲಿ ಪುಷ್ಕಳವಾದ ಧರ್ಮದ ಊಟ. ಆದರೂ ಜನ ದೃಶ್ಯ ಮಾಧ್ಯಮವೆಂಬ ಅಗ್ನಿಗೋಳಕ್ಕೆ ಮುತ್ತಿಕ್ಕಲು ಜನ ಬಯಸುತ್ತಾರೆ.

”ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ” -ಅಡಿಗ

0 comments:

Post a Comment