ಮೀಡಿಯಾ ಮಿರ್ಚಿ-ಬ್ಯಾಡ್ಗಿಯೋ ಗುಂಟೂರೋ....
Posted by
Nishada Kanjari
on Sunday, July 19, 2009
ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೆರಡರಲ್ಲೂ ಕೆಲಸ ಮಾಡಿರುವ ಜಿ ಎನ್ ಮೋಹನ ವಿಜಯಕರ್ನಾಟಕದಲ್ಲಿ ಇನ್ನು ಮುಂದೆ ಪ್ರತಿ ಶನಿವಾರ ’ಮೀಡಿಯಾ ಮಿರ್ಚಿ’ ಅಂಕಣ ಬರೆಯುತ್ತಾರೆ. ಒಳ್ಳೆಯ ಅಲೋಚನೆ.
ಎಲ್ಲಾ ಆರಂಭಗಳೂ, ಮೊದಲ ಹೆಜ್ಜೆಗಳೂ ಒಳ್ಳೆಯ ಉದ್ದೇಶಗಳನ್ನೇ ಹೊಂದಿರುತ್ತವೆ. ಆದರೆ ಅವು ಕಾರ್ಯರೂಪಕ್ಕೆ ಬಂದಾಗ, ಬರಬರುತ್ತಾ ರಾಯರ ಕುದುರೆ ಕತ್ತೆಯಾಗುವ ಸಾಧ್ಯತೆಗಳೂ ಇರುತ್ತವೆ.
ವಿಜಯಕರ್ನಾಟಕದಂತಹ ಪತ್ರಿಕೆಯಲ್ಲಿ ಏನು ಬಂದರೂ ಅದನ್ನು ಸಂಶಯದಿಂದಲೇ ನೋಡಬೇಕಾಗುತ್ತದೆ. ಆ ಹಿನ್ನೆಲೆ ಅದಕ್ಕಿದೆ. ಹಾಗೆ ನೋಡಿದರೆ ’ಸಂಶಯ’ವೇ ಒಬ್ಬ ಪತ್ರಕರ್ತನ ಸಹಜ ಗುಣಧರ್ಮವಾಗಬೇಕು. ಸಂಶಯಪಡುತ್ತಲೇ ಒಂದು ನಿರ್ಧಿಷ್ಟ ಅಭಿಪ್ರಾಯದೆಡೆಗೆ ಓದುಗ ಸಾಗುತ್ತಿರಬೇಕು. ಆದರೆ ಒಂದೇ ಫೆಪರನ್ನು ತರಿಸುವ ಕೆಳ ಮಧ್ಯಮವರ್ಗದವರು ಅದರಲ್ಲಿ ಬಂದದ್ದೆಲ್ಲವನ್ನು ನಿಜವೆಂದು ಒಪ್ಪಿಕೊಳ್ಳುವ ಸಾಧ್ಯತೆ ಇದೆ. ಆ ಒಂದೇ ಪೇಪರು ತರಿಸಿಕೊಳ್ಳುವ ಬಹುಸಂಖ್ಯಾತರು ವಿಜಯಕರ್ನಾಟಕದ ಓದುಗರು ಎಂಬುದು ಕೂಡ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ. ಹತ್ತಾರು ಪತ್ರಿಕೆಗಳನ್ನು ಓದುವ-ತಿರುವಿ ಹಾಕುವ ಸಾಮರ್ಥ್ಯವುಳ್ಳ ರಾಜಕಾರಣಿಗಳು ಅಲ್ಪಸಂಖ್ಯಾತರು. ಅವರನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಹಾಗಾಗಿ ಈಗ ಹೊಸದಾಗಿ ಆರಂಭವಾಗಿರುವ ಮೀಡಿಯಾಮಿರ್ಚಿ ಬಹುಸಂಖ್ಯಾತರ ಮೇಲೆ ಪ್ರಭಾವ ಬೀರಬಲ್ಲ ಅಂಕಣ. ಅದಕ್ಕೆ ಜಿ.ಎನ್.ಮೋಹನ್ ಬಗ್ಗೆ ಅಷ್ಟೊಂದು ಟೀಕೆ-ಟಿಪ್ಪಣಿಗಳು ನಡೆಯುತ್ತಿವೆ.
ಮೋಹನ್ ಎಡಪಂಥಿಯ ವಿಚಾರಧಾರೆಯ ಬಗ್ಗೆ ಒಲವುಳ್ಳವರು. ಇತ್ತೀಚೆಗೆ ವೈಯಕ್ತಿಕವಾಗಿ ಅನುಕೂಲಸಿಂಧು ವರ್ತಮಾನಕ್ಕೆ ಒಗ್ಗಿಕೊಂಡಂತೆ ಭಾಸವಾಗುತ್ತಿರುವವರು. ಹಾಗಾಗಿ ವಿಜಯಕರ್ನಾಟ್ಕದ ಜೊತೆ ಬ್ಲೆಂಡ್ ಆಗಬಹುದು. ಮಿರ್ಚಿಮಸಾಲೆಗೆ ಹಾಕಿದ ಮೆಣಸು ಗುಂಟೂರಿನದೋ ಬ್ಯಾಡ್ಗಿಯದೋ ಘಾಟಿನ ಮೇಲೆ ನಿರ್ಧಾರವಾಗುತ್ತದೆ.
ಮೋಹನ್ ನಿಷ್ಪಕ್ಷಪಾತಿಯಾಗಿದ್ದರೆ ಮೊದಲು ಚಾಟಿ ಬೀಸಬೇಕಾದ್ದೇ ವಿಜಯಕರ್ನಾಟಕದ ಮೇಲೆ. ಅದು ಸಾಧ್ಯವಾಗಬಹುದೇ?
ಮೀಡಿಯಾದಲ್ಲಿ ಕೆಲಸ ಮಾಡುವವರೆಲ್ಲಾ ಕೂಲಿಯಾಳುಗಳು. ಅವರಿಗೊಬ್ಬ ಮೇಸ್ತ್ರಿ ಇರುತ್ತಾನೆನ್ನಿ. ಅವನಿಗೆ ಒಂದಷ್ಟು ಅಧಿಕಾರವೂ ಇರುತ್ತದೆ. ಆದರೆ ಪರಮಾಧಿಕಾರ ಯಜಮಾನನ ಕೈಯಲ್ಲಿರುತ್ತದೆ. ಆತನಿಗೆ ಕೂಲಿಯಾಳುಗಳ ಸಮಸ್ಯೆಯ ಅರಿವಿರುವುದಿಲ್ಲ. ಅವನೊಬ್ಬ ಬ್ಯುಸಿನೆಸ್ ಮೆನ್ ಅಷ್ಟೇ. ಅವನು ಮಿದುಳಿನಿಂದ ಯೋಚಿಸುತ್ತಾನೆ; ಹೃದಯದಿಂದಲ್ಲ.
ನಿಮ್ಮ ಜೊತೆ ಸೇರಿ ನಾನೂ ಕಲಿಯುವ ಪ್ರಯತ್ನ ಮಾಡುತ್ತೇನೆ ಎಂದು ಮೋಹನ್ ಹೇಳಿದ್ದಾರೆ. ನೋಡೋಣ; ಅವರು ಕಲಿತ ಪಾಠಗಳಿಗೆ ವಿಜಯಕರ್ನಾಟಕ ಇನ್ನೊಂದು ಅಧ್ಯಾಯ ಸೇರಿಸುತ್ತಾ.....?
0 comments:
Post a Comment