Visitors

ವಿಶ್ವೇಶಭಟ್ಟರು ಹೋದರು ಶಶಿಧರ್ ಭಟ್ಟರು ಬಂದರು !

ಕಳೆದ ವಾರ ವಿಜಯಕರ್ನಾಟಕದ ಸಂಪಾದಕರಾಗಿದ್ದ ವಿಶ್ವೇಶಭಟ್ಟರು ರಾಜೀನಾಮೆ ಕೊಟ್ಟಾಗ ನನ್ನ ಗೆಳತಿಯೊಬ್ಬಳು ಪ್ರತಿಕ್ರಿಯಿಸಿದ್ದು ಹೀಗೆ; ಇದು ಪತ್ರಿಕೋದ್ಯಮದ ನೈತಿಕತೆಗೆ ಸಿಕ್ಕಿದ ಜಯ.

ಈ ಮಾತು ಸ್ವಲ್ಪ ಅತಿಶಯೋಕ್ತಿ ಎನಿಸಿದರೂ ಇತ್ತೀಚಿಗಿನ ವರ್ಷಗಳಲ್ಲಿ ಪತ್ರಿಕಾರಂಗವು ಒಂದು ಉದ್ಯಮವಾಗಿ ಬೆಳೆದ ಬಗೆ ಮತ್ತು ಅದರ ಲಾಭಾಂಶವನ್ನು ಪಡೆಯುತ್ತಿರುವ ದೊಡ್ಡ ಪಡೆ ಸೃಷ್ಟಿಯಾಗಿರುವುದನ್ನು ಗಮನಿಸಿದಾಗ ಇದರಲ್ಲಿ ಹುರುಳಿದೆ ಎನಿಸದಿರದು.

ಪ್ರಜಾಪ್ರಭುತ್ವದ ಮೂರು ಸ್ತಂಭಗಳಾದ ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಾಂಗಗಳ ಜೊತೆಗೆ ಪತ್ರಿಕಾರಂಗವನ್ನು ನಾಲ್ಕನೆಯ ಸ್ತಂಬವೆಂದು ಪರಿಗಣಿಸಲಾಗುತ್ತದೆ. ಪ್ರಜಾಪ್ರಭುತ್ವದ ಉಳಿವಿಗೆ ಈ ನಾಲ್ಕು ಸ್ತಂಭಗಳು ಒಟ್ಟಾಗಿ ಕೆಲಸ ಮಾಡಬೇಕು. ಆದರೆ ಹಾಗಾಗುತ್ತಿದೆಯೇ?

ಆಳುವ ದೊರೆಗಳು ದಾರಿ ತಪ್ಪಿದಾಗ ಜನ ಮಾಧ್ಯಮದತ್ತ ನೋಡುತ್ತಾರೆ. ಆದರೆ ಸಮಾಜದ ಸಾಕ್ಷಿಪ್ರಜ್ನೆಯಂತೆ ಕೆಲಸ ಮಾಡಬೇಕಾದ ಮಾಧ್ಯಮಗಳು ಒಂದು ಪಕ್ಷದ, ಒಂದು ವ್ಯಕ್ತಿಯ ತುತ್ತೂರಿಯಾಗಿಬಿಟ್ಟರೆ....?ಪತ್ರಕರ್ತರು ವೈಯಕ್ತಿಕ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು, ಹೆಣ್ಣು -ಹೊನ್ನು-ಮಣ್ಣನ್ನು ಪುಕ್ಕಟೆಯಾಗಿ ಪಡೆದುಕೊಳ್ಳಲು ಮಾಧ್ಯಮವನ್ನು ಅಸ್ತ್ರದಂತೆ ಬಳಸತೊಡಗಿದರೆ....?ಗುಂಪುಗಾರಿಕೆ, ಸ್ವಜನಪಕ್ಷಪಾತದಲ್ಲಿ ರಾಜಕಾರಣಿಗಳನ್ನೂ ಮೀರಿಸತೊಡಗಿದರೆ.....?ಜನರು ಮಾಧ್ಯಮವನ್ನು ಸಂಶಯದಿಂದಲೇ ನೋಡುತ್ತಾರೆ. ಸಾಮಾಜೀಕ ನ್ಯಾಯ ಎಂಬ ಪರಿಕಲ್ಪನೆಯೇ ಹುಸಿಯಾಗುತ್ತದೆ.

ರಾಡಿಯಾ ಟೇಪ್ ಹಗರಣದಿಂದ ಹಿಡಿದು ವಿಶ್ವೇಶಭಟ್ಟರ ರಾಜೀನಾಮೆ ಪ್ರಕರಣದವರೆಗೆ ಜನ ಮುಕ್ತವಾಗಿ ಮಾತಾಡುತ್ತಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ಎಗ್ಗಿಲ್ಲದೆ ಹರಿಯಬಿಡುತ್ತಿದ್ದಾರೆ. ಆದರೆ ಮಾಧ್ಯಮ ಇದರ ಬಗ್ಗೆ ಮುಗುಮ್ಮಾಗಿ ಮುಸುಕು ಹೊದ್ದು ಕುಳಿತಿದೆ. ತಮ್ಮ ಸ್ವಂತದ ಪೇಸ್ ಬುಕ್, ಬ್ಲಾಗ್ ಗಳಲ್ಲಿಯೂ ಬರೆಯಲೂ ಹೆದರುತ್ತಿದ್ದಾರೆ. ರಾಜಕಾರಣಿಗಳಂತೂ ಪತ್ರಕರ್ತರ ಸಹವಾಸದಿಂದಲೇ ದೂರವಿದ್ದರೆ ಒಳಿತು ಎಂಬಂತೆ ವರ್ತಿಸುತ್ತಿದ್ದಾರೆ. ಮಾಧ್ಯಮ ಟೆರರಿಸಂ ಎಂದರೆ ಇದೇ ಇರಬಹುದೇ?

ಇಂತಹ ಸನ್ನಿವೇಶದಲ್ಲಿ ’ಸಮಯ ನ್ಯೂಸ್’ ವಾಹಿನಿಯ ಮುಖ್ಯಸ್ಥರಾಗಿ ಹಿರಿಯ ಪತ್ರಕರ್ತ ಶಶಿಧರ್ ಭಟ್ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಭಟ್ಟರು ’ಸುವರ್ಣ ನ್ಯೂಸ್’ ಚಾನಲ್ ಅನ್ನು ಕಟ್ಟಿ ಬೆಳೆಸಿದ್ದರು. ಅನಂತರ ಅದನ್ನು ಎಚ್.ಆರ್. ರಂಗನಾಥ್ ಆಕ್ರಮಿಸಿಕೊಂಡಿದ್ದರು.

ಸುವರ್ಣ ನ್ಯೂಸ್ ಚಾನಲ್ ಆರಂಭಗೊಂಡಾಗ ಭಟ್ಟರು ಸೂತ್ರದ ಗೊಂಬೆಯಂತಿದ್ದರು. ಅವರಿಗೆ ಯಾವ ಅಧಿಕಾರವೂ ಇರಲಿಲ್ಲ. ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿರುವ ಉದ್ಯಮಿ ರಾಜೀವ ಚಂದ್ರಶೇಖರ ಚಾನಲ್ ಮಾಲೀಕರಾಗಿದ್ದರು. ಹಿರಿಯ ನಟಿ ಮೈನಾವತಿ ಮಗ ಶ್ಯಾಮಸುಂದರ್ ಸಿಇಓ ಆಗಿದ್ದರು. ಅವರ ನಿಧನದ ನಂತರ ಸಿಇಓ ಆಗಿ ಬಂದವರು ಸಂಜಯಪ್ರಭು. ಅವರಿಗೆ ಕನ್ನಡ ಬಾರದು. ಕನ್ನಡ ಬಾರದ ಮಾಲೀಕ ಮತ್ತು ಸಿಇಓ. ಅವರ ದೃಷ್ಟಿಯಲ್ಲಿ ಪತ್ರಕರ್ತರು ಕೂಡಾ ಕಾರ್ಮಿಕರೇ.
ಚಾನಲ್ ನಲ್ಲೇ ಗುಂಪುಗಳಾದವು. ಭಟ್ಟರ ವಿರುದ್ಧ ಗುಂಪನ್ನು ಸಿಇಓ ಎತ್ತಿಕಟ್ಟಿದರು. ಈ ಸಮಯದಲ್ಲೇ ಕನ್ನಡಪ್ರಭದ ರಂಗನಾಥ್ ಚಾನಲ್ ಮುಖ್ಯಸ್ಥರಾದರು. ಪತ್ರಕರ್ತರಾಗಿದ್ದೂ ಬ್ಯುಸಿನೆಸ್ ಮ್ಯಾನ್ ಆಗಿರುವ ರಂಗನಾಥ್ ಮಾಲೀಕರ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುತ್ತಾ ಪರಸ್ಪರ ಆಸರೆಯಾಗತೊಡಗಿದರು. ಶಶಿಧರ್ ಭಟ್ ರನ್ನು ಜ್ಯುಪಿಟರ್ ಗೆ ವರ್ಗಯಿಸಲಾಯ್ತು. ಕನ್ನಡಪ್ರಭದಿಂದ ಜೋಗಿ, ರವಿಹೆಗ್ಡೆ, ಉದಯ ಮರಕಿಣಿ ಸೇರಿದಂತೆ ಸುಮಾರು ೫೦ ಜನರ ದಂಡು ಸುವರ್ಣಕ್ಕೆ ಧಾಳಿಯಿಟ್ಟಿತು. ಖರ್ಚು ದುಪ್ಪಟ್ಟಾಯಿತು. ಕೆಲಸವಿಲ್ಲದೆ ಕುಳಿತ್ತಿದ್ದ ಭಟ್ಟರು ಸುವರ್ಣ ಗ್ರೂಪ್ ಬಿಟ್ಟು ಹೊರನಡೆದರು.

ಈಗ ಶಶಿದರ್ ಭಟ್ ಸಮಯ ನ್ಯೂಸ್ ಚಾನಲ್ ಹೆಡ್ ಆಗಿ ಗುರುವಾರ ಸಂಜೆ ಅಧಿಕಾರ ಸ್ವೀಕರಿಸಿದ್ದಾರೆ. ಈಗ ಅವರು ಸುವರ್ಣ ನ್ಯೂಸ್ ಚಾನಲ್ ನಲ್ಲಿದ್ದಂತೆ ನಿರಾಯುಧರಲ್ಲ. ಶಸ್ತ್ರ ಸಜ್ಜಿತರಾಗಿ ಬಂದಿದ್ದಾರೆ. ಜೊತೆಗೆ ಕೈಯಲ್ಲಿ ಕತ್ತರಿ ಇದೆ.
ಅಲ್ಲಿ ವಿಜಯಕರ್ನಾಟಕದಲ್ಲಿ ತಾತ್ಕಾಲಿಕ ಸಂಪಾದಕರಾಗಿರುವ ಇ. ರಾಘವನ್ ಅವರು ಶುದ್ಧಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೊಸ ಸಂಪಾದಕರ ಆಗಮನವನ್ನು ಪತ್ರಿಕೆ ಕಾಯುತ್ತಿದೆ. ಕಳಂಕ ರಹಿತ, ಪ್ರಾಮಾಣಿಕ ಪತ್ರಕರ್ತರಾದ ದಿನೇಶ್ ಅಮಿನಮಟ್ಟು ಹೆಸರು ಮುಂಚೂಣಿಯಲ್ಲಿದೆ. ಅವರು ಆ ಹುದ್ದೆಯನ್ನು ಅಲಂಕರಿಸಿದರೆ ನಿಜವಾಗಿಯೂ ನಿಶಾದ ಕಂಜರಿ ಖುಷಿ ಪಡುತ್ತಾಳೆ.

ದೃಶ್ಯ ಮಾಧ್ಯಮದಲ್ಲಿ ಶಶಿಧರ್ ಭಟ್, ಮುದ್ರಣ ಮಾಧ್ಯಮದಲ್ಲಿ ಅಮಿನಮಟ್ಟು. ಆಗ ನನ್ನ ಗೆಳತಿ ಹೇಳಿದ ಮಾತು ನಿಜವಾಗುತ್ತದೆ ’ಇದು ಪ್ರಾಮಾಣಿಕ ಪತ್ರಿಕೋಧ್ಯಮಕ್ಕೆ ಸಿಕ್ಕ ನೈತಿಕ ಜಯ’
ಆದರೆ ಹಾಗಾಗುತ್ತದೆಯೇ? ಕಷ್ಟ ಸಾಧ್ಯ.
ಯಾಕೆಂದರೆ ಕನ್ನಡ ಪತ್ರಿಕೋದ್ಯಮ ತುಂಬಾ ಚಿಕ್ಕ ಕ್ಷೇತ್ರ. ಕಳಂಕಿತರೆಲ್ಲಾ ಮತ್ತೆ ಆಯಕಟ್ಟಿನ ಜಾಗಗಳನ್ನು ಹುಡುಕಿಕೊಳ್ಳುತ್ತಿರುವ ವಿಚಾರ ನಿಷಾದ ಕಂಜರಿಗೆ ಗೊತ್ತಾಗಿದೆ. ಇರಲಿ. ಭೂಮಿ ಗುಂಡಗಿದೆ. ಎಲ್ಲಾದರೂ ಒಂದು ಕಡೆ ನಾವು ಸಂಧಿಸಲೇ ಬೇಕು!