Visitors

ಬಿ.ಬಿ.ಸಿಗೊಂದು ಎಡಿಟೋರಿಯಲ್ ಗೈಡ್ ಲೈನ್ಸ್






ಟೀವಿ ಚಾನಲ್ ಗಳನ್ನು ಕೈ ಯಾಂತ್ರಿಕವಾಗಿ ಬದಲಾಯಿಸ್ತ ಇತ್ತು. ಸುದ್ದಿ ಚಾನಲ್ಲೊಂದರಲ್ಲಿ ’ಪಂಚರಂಗಿ ಪಾಂಚಾಲಿ’ ಎಂಬ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ’ಸಚ್ ಕ ಸಾಮ್ನ’ ಎಂಬ ರಿಯಾಲಿಟಿ ಶೋದಲ್ಲಿ ತನ್ನ ಅಂತರಂಗದ ಗುಟ್ಟುಗಳನ್ನು ಬಹಿರಂಗಪಡಿಸಿದ ದ್ರೌಪದಿ ಪಾತ್ರಧಾರಿಣಿಯಾಗಿದ್ದ ರೂಪಗಂಗೂಲಿ ಬಿಚ್ಚಿಟ್ಟ ಸತ್ಯಗಳನ್ನಾದರಿಸಿದ ಕಾರ್ಯಕ್ರಮವಿದು.

ಮಂಗಳವಾರ ಪ್ರಸಾರ ಕಂಡ ಈ ಕಾರ್ಯಕ್ರಮವನ್ನು ಉಪೇಕ್ಷಿಸಿ ಚಾನಲ್ ಬದಲಾಯಿಸಿದ್ದೆ. ಯಾಕೆಂದರೆ ಕಾರ್ಯಕ್ರಮ ಪುರುಷ ಪಕ್ಷಪಾತಿಯಾಗಿ ಮುಂದುವರಿಯುತ್ತಿತ್ತು. ಇಂದು ಅದು ನೆನಪಿಗೆ ಬಂತು; ಯಾಕೆಂದರೆ ಇಂದು ವಿಶ್ವ ಹೆಣ್ಣುಮಕ್ಕಳ ದಿನಾಚರಣೆಯಂತೆ. ಅದು ಕೂಡ ಗೊತ್ತಾದದ್ದು ಈಟೀವಿ ನ್ಯೂಸ್ ನಿಂದ.

ಟೀವಿ ರಿಮೋಟ್ ವೀಕ್ಷಕರ ಕೈಯಲ್ಲಿರುತ್ತೆ. ಹಾಗಾಗಿ ಬೇಕಾದ ಚಾನಲ್ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಸುದ್ದಿ ಚಾನಲ್ ಗಳ ಲೈವ್ ಕವರೇಜ್ ಕೆಲವೊಮ್ಮೆ ಮನಸ್ಸನ್ನು ಘಾಸಿಗೊಳಿಸುತ್ತೆ. ಅದರಲ್ಲೂ ದುರ್ಮರಣಕ್ಕಿಡಾದವರ ಆಪ್ತರ ಮುಂದೆ ಸೌಂಡ್ ಬೈಟ್ ಗಾಗಿ ಮೈಕ್ ಹಿಡಿಯುವುದಿದೆಯಲ್ಲಾ ಅದು ತುಂಬಾ ಅಮಾನವೀಯ ಅನ್ನಿಸುತ್ತೆ. ಹಿಂಸೆಯಾಗುತ್ತೆ. ಸಾವನ್ನು, ಅತ್ಯಾಚಾರವನ್ನು ಮಾರ್ಕೇಟ್ ಮಾಡಿಕೊಳ್ಳುವುದು ಅನಾಗರೀಕತೆ ಎನಿಸಿಕೊಳ್ಳುವುದಿಲ್ಲವೇ?

ಸುದ್ದಿ ಚಾನಲ್ ಗಳ ಹಿರಿಯಣ್ಣನಂತಿರುವ ಬಿ.ಬಿ.ಸಿ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿದೆ. ಅದಕ್ಕಾಗಿ ಅದು ತನ್ನ ಎಡಿಟೋರಿಯಲ್ ಗೈಡ್ ಲೈನ್ಸ್ ಅನ್ನು ಕಳೆದ ಜುಲೈ ಇಂದ ಜಾರಿಗೆ ತಂದಿದೆ.
ಹೀಗೊಂದು ಅಲೋಚನೆ ಅದಕ್ಕೆ ಬರಲು ಕಾರಣವಾದ ಘಟನೆಯೇ ರಷ್ಯನ್ ಫೆಡರೇಷನ್ ನ ಬೆಸ್ಲಾನ್ ಶಾಲಾ ಮಕ್ಕಳ ದುರಂತ
೨೦೦೪ರ ಸೆ.೧ರಂದು ಚೆಚನ್ಯಾ ಬಂಡುಕೋರರು ಬೆಸ್ಲಾನ್ ಶಾಲೆಯ ೧೧೦೦ ಮಕ್ಕಳನ್ನು ಮತ್ತು ಅವರ ಪೋಷಕರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿತ್ತು. ಸತತ ೫ ದಿನ ಅವರನ್ನು ಸ್ಕೂಲಿನ ಜಿಮ್ ನಲ್ಲಿ ಕೂಡಿ ಹಾಕಲಾಗಿತ್ತು. ಅನ್ನ ನೀರು, ಔಷಧಿ ಸರಬರಾಜಿಗೂ ಉಗ್ರಗಾಮಿಗಳು ಅವಕಾಶ ಕೊಡಲಿಲ್ಲ. ಇಬ್ಬರು ಮಹಿಳೆಯರೂ ಸೇರಿದಂತೆ ಒಟ್ಟು ೩೪ ಉಗ್ರಗಾಮಿಗಳಿದ್ದರು. ಜಿಮ್ ನಲ್ಲಿ ಸೊಪೋಕೇಶನ್ ಉಂಟಾಗಿ ಆ ಪುಟ್ಟ ಮಕ್ಕಳು ಪ್ರಜ್ನಾಶೂನ್ಯರಾದರು. ಕ್ರಮೇಣ ಸಾಯತೊಡಗಿದರು. ರಷ್ಯನ್ ಸೈನ್ಯ ಬಂಡುಕೋರರಿಂದ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳುವ ಹೊತ್ತಿಗೆ ೩೩೪ ಜನ ಸತ್ತಿದ್ದರು. ಅವರಲ್ಲಿ ೧೮೬ ಮಕ್ಕಳಾಗಿದ್ದರು.

ಮೇಲಿನ ಘಟನೆಯನ್ನು ಬಿ.ಬಿ.ಸಿ ಸೇರಿದಂತೆ ಎಲ್ಲಾ ಸುದ್ದಿ ಚಾನಲ್ ಗಳು ಲೈವ್ ಕವರೇಜ್ ನೀಡಿದ್ದವು. ಸತ್ತ ಮಕ್ಕಳನ್ನು ಉಗ್ರಗಾಮಿಗಳು ಶಾಲೆಯಿಂದ ಹೊರಕ್ಕೆ ಎಸೆಯುತ್ತಿದ್ದರು. ಅದನ್ನೆಲ್ಲಾ ನಾವು ಲೈವ್ ಕವರೇಜ್ ನಲ್ಲಿ ನೋಡಿದ್ದೇವೆ. ಸೆ.೧ ಬಾಸ್ಲೇನ್ ಶಾಲೆಯಲ್ಲಿ ’ಡೇ ಅಫ್ ನಾಲೆಡ್ಜ್’ ದಿನ. ಅಂದರೆ ನಮ್ಮ ಶಿಕ್ಷಕರ ದಿನಾಚರಣೆಗೆ ಹತ್ತಿರದ ದಿನದಂತೆ. ಮಕ್ಕಳೆಲ್ಲಾ ತಮ್ಮ ಫೋಷಕರ ಕೈ ಹಿಡಿದುಕೊಂಡು ಪ್ರೀತಿಯ ಟೀಚರ್ ಗೆ ಹೂವು, ಗಿಪ್ಟ್, ಬೆಲೂನ್ ಗಳನ್ನು ಕೊಡಲು ಶಾಲೆಯೊಳಗೆ ಹೋದವರು ಹೆಣವಾಗಿ ಹೊರಬೀಳುತ್ತಿದ್ದರು.

ಬಿ.ಬಿ.ಸಿ ಇದನ್ನು ಲೈವ್ ಕವರೇಜ್ ಮಾಡಿದ ನಂತರದಲ್ಲಿ ಬಹುಶಃ ಬಹಳಷ್ಟು ವಿಚಾರ ವಿಮರ್ಶೆ ನಡೆಸಿರಬೇಕು. ಹಾಗಾಗಿ ಅದು ಸೆನ್ಸಿಟಿವ್ ಲೈವ್ ನ್ಯೂಸ್ ಕವರೇಜ್ ಗೆ ಎಡಿಟೋರಿಯಲ್ ಗೈಡ್ ಲೈನ್ಸ್ ಅನ್ನು ರೂಪಿಸಿತು. ಸುದ್ದಿಯಲ್ಲಿ ’ವೇಗಕ್ಕಿಂತಲೂ ನಿಖರತೆ ಮುಖ್ಯ’ ಎಂಬುದು ಬ್ರೇಕಿಂಗ್ ನ್ಯೂಸ್ ನ ಬದ್ದತೆ; ಸೆನ್ಸಿಟಿವ್ ನ್ಯೂಸ್ ಅನ್ನು ಪ್ರಸಾರ ಮಾಡುವಾಗ ವಿಳಂಬನೀತಿಯನ್ನು ಅನುಸರಿಸಬೇಕು. ಎಷ್ಟು ವಿಳಂಬಿಸಬೇಕು ಎಂಬುದನ್ನು ಸುದ್ದಿ ಮುಖ್ಯಸ್ಥರು ತೀರ್ಮಾನಿಸುತ್ತಾರೆ. ಇದು ವೀಕ್ಷಕರ ಜೊತೆಗೆ ನಮ್ಮ ಒಪ್ಪಂದ. ಅವರು ನಮ್ಮ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಇವು ನಮ್ಮ ಸಂಪಾದಕೀಯದ ನೀತಿ ಮತ್ತು ಮೌಲ್ಯಗಳು’ ಎಂದು ಬಿ.ಬಿ.ಸಿಯ ಸಂಪಾದಕೀಯ ಪಾಲೀಸಿಯ ನಿಯಂತ್ರಕರಾದ ಸ್ಟೀಪನ್ ವೈಟಲ್ ಹೇಳುತ್ತಾರೆ.

ಸಂಸ್ಥೆಯ ಉದೋಗಿಯೊಬ್ಬರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಅನ್ನಿಸಿದರೆ ಸಂಪಾದಕೀಯ ಪಾಲಿಸಿಯ ನಿಯಂತ್ರಕರೇ ಅದನ್ನು ಪರಿಸೀಲನೆಗೆ ಒಳಪಡಿಸುತ್ತಾರೆ. ಗೈಡ್ ಲೈನ್ಸ್ ೧೮ ವರ್ಷ ಕೆಳಗಿನ ವೀಕ್ಷಕರ ರಕ್ಶಣೆ, ಕ್ರೈಮ್, ಹಿಂಸೆ ಮತ್ತು ಅಪರಾಧ, ರಿಲೀಜಿಯನ್, ಪ್ರೈವಸಿ ಮತ್ತು ನಿಷ್ಪಕ್ಷಪಾತದ ಮೇಲೆ ಲಕ್ಷ್ಯವನ್ನು ಇಟ್ಟಿದೆ.

ಕ್ರೈಮ್ ಮತ್ತು ಸಮಾಜಘಾತುಕ ನಡವಳಿಕೆಗಳಿಗೆ ಸಂಬಂಧಿಸಿದ ವರಧಿಗಳು ಪ್ರಸಾರವಾಗಬೇಕಾದರೆ ಗೈಡ್ ಲೈನ್ಸ್ ಮುಖ್ಯಸ್ಥರ ಪರಿಶೀಲನೆಗೆ ಒಳಪಡಲೇ ಬೇಕು.

ನಮ್ಮಲ್ಲಿಯೂ ಇಂತಹದೊಂದು ಗೈಡ್ ಲೈನ್ಸ್ ಬೇಕು ಅನ್ನಿಸುತ್ತದೆಯಲ್ಲವೇ?

ಒಂದು ಸುದ್ದಿ ಹಲವು ಮುಖ

ಆಂದ್ರ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ ದುರ್ಮರಣವನ್ನಪ್ಪಿದ ದಿನ ನಾನು ಬೆಂಗಳೂರಿನಲ್ಲಿರಲಿಲ್ಲ. ಹಾಗಾಗಿ ನಾನಿದ್ದ ಊರಿನಲ್ಲಿ ಟೀವಿ೯ ಎಂಬ ಸುದ್ದಿ ವಾಹಿನಿಯ ಲೈವ್ ಟೆಲಿಕಾಸ್ಟ್ ನ್ನು ಮಾತ್ರವೇ ನೆಚ್ಚಿಕೊಳ್ಳುವುದು ಅನಿರ್ವಾಯವಾಗಿತ್ತು. ಕೆಲಸದ ಮಧ್ಯೆ ಆಗಾಗ ಟೀವಿಯನ್ನು ಇಣುಕಿ ನೋಡುತ್ತಿದ್ದೆ. ಯಾವಾಗ ವೈಎಸ್ ಅರ್ ಮರಣ ಖಚಿತವಾಯ್ತೋ ಆಗ ಅವರ ಬಗ್ಗೆ, ಅವರ ವ್ಯಕ್ತಿತ್ವದ ಬಗ್ಗೆ ಮತ್ತಷ್ಟು ವಿವರಗಳು ಬೇಕೆನಿಸಿತು.

ಟೀವಿ೯ನಲ್ಲಿ ಹಮೀದ್ ಪಾಳ್ಯ ಪ್ರೇಮ್ ಚಂದ್ರ ಸಾಗರ್ ರವರನ್ನು ಕೂರಿಸಿಕೊಂಡು ಅವರ ಸಹಪಾಠಿಯಾಗಿದ್ದ ವೈ ಎಸ್ ಆರ್ ಸ್ವಭಾವದ ಬಗ್ಗೆ ಅವರ ಮೆಡಿಕಲ್ ಕಾಲೇಜಿನಲ್ಲಿನ ವಿದ್ಯಾರ್ಥಿ ಬದುಕಿನ ಅನುಭವಗಳ ಬಗ್ಗೆ ಪ್ರಶ್ನಿಸುತ್ತಿದ್ದರು. ಉದಯ ವಾರ್ತೆಗಳತ್ತ ಹೊರಳಿದರೆ ಅದು ಎಂದಿನಂತೆ ಇದಕ್ಕೂ ನಮಗೂ ಸಂಬಂಧವೇ ಇಲ್ಲದಂತೆ ಯಾವುದೋ ಸಂದರ್ಶನವನ್ನು ಮರುಪ್ರಸಾರ ಮಾಡುತ್ತಿತ್ತು. ಮಲೆಯಾಳದ ಏಷ್ಯಾನೆಟ್ ನ್ಯೂಸ್ ಚಾನಲ್ ಮಾತ್ರ ಒಂದೆರಡು ಪ್ಯಾಕೇಜ್ ಗಳನ್ನು ಮಾಡಿ ವೈಎಸ್ ಆರ್ ಬಗ್ಗೆ ಒಂದಷ್ಟು ವಿವರಗಳನ್ನು ನೀಡಿತು.

ನಿಜ. ಒಬ್ಬ ಜನಾನುರಾಗಿ ವ್ಯಕ್ತಿ ಸತ್ತಾಗ ಆತನ ಒಳ್ಳೆಯತನವನ್ನಷ್ಟೇ ಹಾಡಿ ಹೊಗಳಲಾಗುತ್ತದೆ. ಆತನ ದೌರ್ಬಲ್ಯಗಳನ್ನು ಉದಾರತೆಯಿಂದ ಕ್ಷಮಿಸಿಬಿಡಲಾಗುತ್ತದೆ. ಅದು ಜನತೆಯ ದೊಡ್ಡ ಗುಣ. ಆ ದೊಡ್ಡ ಗುಣ ಮಾಧ್ಯಮಗಳಿಗೆ ಇರಬಾರದು. ಅದು ನಿಷ್ಪಕ್ಷಪಾತವಾಗಿರಬೇಕು; ಸತ್ಯನಿಷ್ಠವಾಗಿರಬೇಕು; ನಿಷ್ಠೂರವಾಗಿರಬೇಕು. ಅದು ಜನಸಾಮಾನ್ಯರಂತೆ ಭಾವುಕ ನೆಲೆಯಲ್ಲಿ ಪ್ರತಿಕ್ರಿಯಿಸಬಾರದು. ಹಾಗಾಗಿ ವೈಎಸ್ ಅರ್ ಬಗ್ಗೆ ಒಂದು ಗಂಭೀರವಾದ ಚರ್ಚೆಯನ್ನು ನಾನು ದೃಶ್ಯಮಾಧ್ಯಮದಿಂದ ನಿರೀಕ್ಷಿಸಿದ್ದೆ. ಆದರೆ ನನ್ನ ಗಮನಕ್ಕೆ ಬಂದಂತೆ ಅಂತಹ ಚರ್ಚೆ ನಡೆದಿಲ್ಲ. ಯಾವ ದಿನಪತ್ರಿಕೆಗಳೂ ಗಂಭೀರವಾದ ಲೇಖನ ಪ್ರಕಟಿಸಿದಂತಿಲ್ಲ. ದಿ ವೀಕ್ ವಾರಪತ್ರಿಕೆಯಲ್ಲಿ ಕನ್ನಡದವರೇ ಆದ ಸಚ್ಚಿದಾನಂದ ಮೂರ್ತಿ ಕವರ್ ಸ್ಟೋರಿ ಬರೆದರೂ ಅದು ಪೂರ್ಣ ಮಾಹಿತಿಯನ್ನು ನೀಡಿದಂತಿರಲಿಲ್ಲ. ವೈಎಸ್ ಆರ್ ಊಳಿಗಮಾನ್ಯ ಪದ್ದತಿ ಇನ್ನೂ ಜೀವಂತವಾಗಿರುವ ರಾಯಲ ಸೀಮೆಯ ಶ್ರೀಮಂತ ಮನೆತನದಲ್ಲಿ ಹುಟ್ಟಿದವರಾದರೂ ನಕ್ಷಲ್ ನಾಯಕ ಪೆರಿಟಾಲ ರವಿಯ ಜೋತೆ ಆತ್ಮೀಯ ಸಂಬಂಧ ಹೊಂದಿದ್ದರು. ಈ ವಿರೋಧಾಬಾಸ ನನ್ನಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು.

ಜೀವನ ಚರಿತ್ರೆಗಳನ್ನು ನಾನು ಬಹು ಇಷ್ಟಪಟ್ಟು ಓದುತ್ತೇನೆ. ಮನುಷ್ಯಸ್ವಭಾವಗಳ ಬಗ್ಗೆ ನನಗೆ ತೀವ್ರ ಕುತೂಹಲ.ನಿನ್ನೆಯ ಪ್ರಜಾವಾಣಿಯಲ್ಲಿ ದಿನೇಶ್ ಅಮಿನಮಟ್ಟು ತಮ್ಮ ಕಾಲಂ ’ಅನಾವರಣ’ದಲ್ಲಿ ”ವೈಎಸ್ ಆರ್ ಜನಪ್ರಿಯತೆಯ ದೀಪದ ಕೆಳಗಿನ ಕತ್ತಲು”ಎಂಬ ಲೇಖನ ಬರೆದಿದ್ದಾರೆ. ವಿಶ್ಲೇಷಣಾತ್ಮಕವಾದ ಈ ಲೇಖನ ನನ್ನ ಹಲವಾರು ಪ್ರಶ್ನೆ, ಸಂದೇಹ, ಕುತೂಹಲಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡಿದೆ. ನಮ್ಮ ಎಷ್ಟು ಜನ ಪತ್ರಕರ್ತರಿಗೆ ಈ ಸಾಮರ್ಥ್ಯ ಇದೆ?

ಇವತ್ತಿನ ವಿಜಯಕರ್ನಾಟಕದ ೬ನೇ ’ವಿಶಾಲ’ ಪುಟದಲ್ಲಿ ಒಂದು ಸುದ್ದಿ ಪ್ರಕಟವಾಗಿದೆ. ೨೦೦೭ನೇ ವರ್ಷದ ಶ್ರೇಷ್ಠ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಕನ್ನಡದ ನಟಿ ಉಮಾಶ್ರೀ ಪಡೆದುಕೊಂಡಿದ್ದ ಸಂದರ್ಭದ ಲೇಖನವಿದು. ಅದನ್ನು ಬರೆದವರು ದೇವಶೆಟ್ಟಿ ಮಹೇಶ್ ಎಂಬ ಸಿನಿಮಾ ವರದಿಗಾರ. ಅದರ ಹೆಡ್ಡಿಂಗ್ ಹೇಗಿತ್ತು ಗೊತ್ತೆ? ’ಗಂಡ ಬಿಟ್ಟಿದ್ದಕ್ಕೇ ಅವಾರ್ಡ್ ಬಂತಾ?’ ಇದು ಶ್ರೇಷ್ಠ ನಟಿ ಪ್ರಶಸ್ತಿಗೆ ಭಾಜನರಾದವರನ್ನು ಗೌರವಿಸುವ ಪರಿಯೇ? ಸಮಯಪ್ರಜ್ನೆಯೆಂಬುದು ಇಲ್ಲದಿದ್ದರೆ ಇಂತಹ ಲೇಖನ ಪ್ರಕಟಗೊಳ್ಳುತ್ತದೆ. ಸಮಯಪ್ರಜ್ನೆ ಇದ್ದರೆ ’...ದೀಪದ ಕೆಳಗಿನ ಕತ್ತಲು’ ನಂತಹ ಸಮಯಸ್ಪೂರ್ತಿ ಬರಹ ಹುಟ್ಟಿಕೊಳ್ಳುತ್ತದೆ. ವಿಜಯಕರ್ನಾಟಕದ ಪುಟಗಳನ್ನು ವಿಹಾರ, ವಿರಾಜ, ವಿಶಾಲ, ವಿಚಾರ, ವಿಕಾಸ, ವಿರಾಟ, ವಿಜಯ ಎಂದು ವಿಂಗಡಿಸಿರುವುದಕ್ಕೂ ದೇವಶೆಟ್ಟಿಯ ಲೇಖನಕ್ಕೂ ಏನಾದರೂ ಸಂಬಂಧವಿರಬಹುದೇ?

ಪ್ರಜವಾಣಿಯ ಸಹ ಪ್ರಕಟಣೆಯಾದ ’ಸುಧಾ’ದ ಕವರ್ ಸ್ಟೋರಿ ಕೂಡ ವೈಎಸ್ ಆರ್ ಕುರಿತದ್ದೇ ’ದುರಂತ ನಾಯಕ’. ಹನೀಫ್ ಸುಧಾದ ಇನ್ ಚಾರ್ಜ್ ಆದ ಮೇಲೆ ಅದು ಸುದ್ದಿಗೆ ತಕ್ಷಣ ಪ್ರತಿಕ್ರಿಯಿಸುತ್ತಿದೆ. ಹಿಂದೆಲ್ಲಾದರೆ ವೈಎಸ್ ಆರ್ ಲೇಖನ ಮುಂದಿನ ವಾರದಲ್ಲಿ ಬರುತ್ತಿತ್ತು. ಅಥವಾ ಪ್ಯಾಮಿಲಿ ಮ್ಯಾಗಝಿನ್ ಗೆ ಅದು ಸುದ್ದಿಯೇ ಆಗುತ್ತಿರಲಿಲ್ಲವೆನೋ!

ಪ್ರತಿ ಮಂಗಳವಾರ ಬೆಳಿಗ್ಗೆ ೯ಘಂಟೆಗೆ ಆಕಾಶವಾಣಿ ಕಾಮನಬಿಲ್ಲಿನಲ್ಲಿ ’ಪತ್ರ-ಪತ್ರಕರ್ತ’ ಎಂಬ ಸಂದರ್ಶನ ಪ್ರಸಾರವಾಗುತ್ತದೆ. ಬೆಳ್ಳನೆಯ ಬೆಳಗಿಗೆ ಮುದ ನೀಡುವ ಕಾರ್ಯಕ್ರಮ. ಇಂದಿನ ಅತಿಥಿ ಖ್ಯಾತ ಬರಹಗಾರರಾದ ಜೋಗಿ. ಎಸ್. ಎಸ್. ಉಮೇಶ್ ನಡೆಸಿಕೊಟ್ಟ ಈ ಕಾರ್ಯಕ್ರಮ ಖುಷಿ ಕೊಟ್ಟಿತು. ಜೋಗಿ ಮನಸ್ಸು ಬಿಚ್ಚಿ ಮಾತಾಡಿದರು. ಧಾರಾವಾಹಿ ಸಂಭಾಷಣೆಗಳಿಗೆ ತಾನೊಂದು ಪ್ಯಾಕ್ಟರಿಯಾದೆ ಎಂದು ತಮ್ಮನ್ನು ತಾವೇ ಗೇಲಿ ಮಾಡಿಕೊಂಡು ನಕ್ಕರು. ತಮ್ಮ ಕನಸು ಕನವರಿಕೆಗಳನ್ನು, ನದಿ, ಕಾಡುಗಳ ಬಗೆಗಿನ ಮೋಹವನ್ನು ಹಂಚಿಕೊಂಡರು. ಟೀವಿ ಧಾರವಾಹಿಗಳು ನಮ್ಮನ್ನು ಒಣಗಿಸಿಬಿಡುತ್ತವೆ; ಅದರಿಂದ ಹೊರಬರುತ್ತೇನೆ; ಸಿನಿಮಾದ ಬಗ್ಗೆ ತನಗೆ ಆಕರ್ಷಣೆಯಿದೆ. ಎಂದು ಮತ್ತೊಮ್ಮೆ ನಕ್ಕರು. ಸಂವೇಧನಾಶೀಲ ಬರಹಗಾರರಾದ, ಅಂತರ್ಮುಖ ವ್ಯಕ್ತಿತ್ವದ ಜೋಗಿಯ ನಗು ಕಾಡಬೆಳದಿಂಗಳಾಗದಿರಲಿ ಎಂಬುದು ನಿಷಾದದ ಹಾರೈಕೆ.

ಅರೋಗ್ಯಕರ ಅಂತರದಲ್ಲಿ ನಿಂತು ಪತ್ರಿಕೋಧ್ಯಮವನ್ನು ಗಮನಿಸುವುದಕ್ಕೆ ನನಗೆ ನಿಜಕ್ಕೂ ಖುಷಿಯಿದೆ.