ಮೊನ್ನೆ ಯಾರೋ ಹೇಳುತ್ತಿದ್ದರು; ಈಗ ಜರ್ನಲಿಸ್ಟ್ ಗಳು ಪರಸ್ಪರ ಎದುರಾದಾಗ ಕೇಳಿಕೊಳ್ಳುವ ಮೊದಲ ಪ್ರಶ್ನೆ ಎಂದರೆ ’ನನ್ನ ಬ್ಲಾಗ್ ನೋಡಿದ್ಯಾ?’ ಅಂದರೆ ಇಂದಿನ ಪತ್ರಕರ್ತರ ಆದ್ಯತೆಗಳಲ್ಲಿ ಬ್ಲಾಗ್ ನಡೆಸುವುದೂ ಒಂದು.
ಹಿಂದೆಲ್ಲಾ ನನ್ನ ವರದಿ ನೋಡಿದ್ರಾ? ಲೇಖನ ಓದಿದ್ರಾ? ನಿಮಗೇನನ್ನಿಸಿತು ಎನ್ನುತ್ತಿದ್ದ ಪತ್ರಕರ್ತರೀಗ ಬ್ಲಾಗ್ ಓದುವಂತೆ ಒತ್ತಾಯಿಸುತ್ತಿದ್ದಾರೆ.
ಆ ಬ್ಲಾಗ್ ಗಳನ್ನು ನೀವು ಒಪನ್ ಮಾಡಿ ಓದಿದ್ರೆ ನಿಮ್ಮ ತಲೆ ಕೆಟ್ಟು ಕೆರ ಹಿಡಿದು ಹೋದೀತು. ಅತೃಪ್ತ ಆತ್ಮದ ಹಳವಂಡಗಳ ಸರಮಾಲೆ. ಮನುಷ್ಯ ಮೂಲತಃ ಕ್ರೂರಿ ಎಂಬ ಮನೋವಿಶ್ಲೇಷಕರ ಮಾತನ್ನು ಇವು ಸಾಬೀತು ಪಡಿಸುತ್ತವೆ. ಆತ ಯಾರ ಏಳಿಗೆಯನ್ನೂ ಸಹಿಸಲಾರ. ಸಮಾಜವನ್ನು ಸರಿ ದಾರಿಯಲ್ಲಿ ಮುನ್ನಡೆಸಲು ಅವಕಾಶವಿರುವ ಪತ್ರಕರ್ತರು ಕೂಡ ಕ್ಷುಲಕ ವಿಚಾರಗಳಿಗೆ ಪರಸ್ಪರ ಕೆಸರೆರಚಿಕೊಂಡು ತಮ್ಮ ಕರ್ತವ್ಯವನ್ನು ಮರೆತರೆ?
ಪತ್ರಕರ್ತರಲ್ಲಿ ವೃತ್ತಿಪರತೆ ಮಾಯವಾಗುತ್ತಿದೆ ಎಂದು ಎಲ್ಲರೂ ಹೇಳುತ್ತಾರೆ. ಅದಕ್ಕೆ ಉದಾಹರಣೆಗಳೂ ಸಿಗುತ್ತಿವೆ. ಈಗ ಮುದ್ರಣ ಮಾಧ್ಯಮದ ಬಹುತೇಕ ವರದಿಗಾರರು ಪತ್ರಿಕಾ ಗೋಷ್ಠಿಗಳಿಗೆ ಹಾಜರಾಗುವುದಿಲ್ಲ. ಆದರೆ ಸುದ್ದಿ ಬರೆದು ಕೊಡುತ್ತಾರೆ. ಹೇಗೆ ಗೊತ್ತೆ? ಹೇಗೂ ನ್ಯೂಸ್ ಚಾನಲ್ ನವರು ಕವರ್ ಮಾಡುತ್ತಾರಲ್ಲ...ಅದನ್ನೇ ನೋಡಿಕೊಂಡು ನಾಲ್ಕು ಸಾಲು ಗೀಚಿದರಾಯ್ತು ಎಂಬ ಉಢಾಪೆ. ಏನಾದರೂ ಸ್ಪಷ್ಟಿಕರಣ ಬೇಕೆಂದಾದರೆ ಸಂಚಾರಿ ದೂರವಾಣಿ ಇದೆಯಲ್ಲಾ. ಆದರೆ ಬಹಳಷ್ಟು ಪತ್ರಕರ್ತರಿಗೆ ಸಂಶಯಗಳೇ ಹುಟ್ಟುವುದಿಲ್ಲ. ಕುಳಿತಲ್ಲಿಯೇ ವರದಿ ಸಿದ್ದಗೊಳ್ಳುತ್ತದೆ; ತನಿಖಾ ವರದಿ ಹುಟ್ಟಿಕೊಳ್ಳುತ್ತದೆ. ರಾಜಕೀಯ ವಿಶ್ಲೇಷಣೆ ರೂಪು ಪಡೆಯುತ್ತದೆ.
ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದಂತೆ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಪತ್ರಿಕಾರಂಗವೂ ಸ್ವಸ್ಥ ಸಮಾಜ ರಚನೆಗಾಗಿ ದುಡಿಯುತ್ತಿರಬೇಕು. ಸದಾ ಎಚ್ಚರದಿಂದಿರಬೇಕು. ಆದರೆ ಪತ್ರಕರ್ತರು ತೂಕಡಿಸುತ್ತಿದ್ದಾರೆ. ಇಲ್ಲವೇ ರಾಜಕಾರಣ ಮಾಡುತ್ತಿದ್ದಾರೆ. ಅವರು ಸುದ್ದಿಯ ಬೆನ್ನು ಹತ್ತುವುದಿಲ್ಲ.
ಕಳೆದ ವಾರ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳು ತಮ್ಮ ಆತ್ಮೀಯರಲ್ಲಿ ಹೇಳಿಕೊಂಡ ಮಾತೊಂದನ್ನು ನಿಷಾದ ಕೇಳಿಸಿಕೊಂಡಿದೆ. ಅವರೊಮ್ಮೆ ವಿಶ್ವವಿದ್ಯಾಲಯದ ಪರೀಕ್ಷೆ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ಕೊಟ್ಟರಂತೆ. ಹಾಲ್ ಹೊರಗಡೆ ಸೂಟ್ ಕೇಸ್ ಗಳು, ಟ್ರಾವಲ್ ಬ್ಯಾಗ್ ಗಳು ಸಾಲಾಗಿ ಇಟ್ಟುಕೊಂಡಿತ್ತಂತೆ. ವಿಚಾರಿಸಿದಾಗ ಅವೆಲ್ಲಾ ಪರೀಕ್ಷೆ ಬರೆಯಲು ಬಂದ ನಾರ್ತ್ ಇಂಡಿಯನ್ಸ್ ಸ್ಟೂಡೆಂಟ್ಸ್ ಗಳದು ಅಂತೆ. ಈ ವಿದ್ಯಾರ್ಥಿಗಳು ಕ್ಲಾಸಿಗೆ ಅಟೆಂಡ್ ಆಗುವುದಿಲ್ಲ. ಆದರೆ ಅವರಿಗೆ ಹಾಜರಿ ನೀಡಲಾಗುತ್ತದೆ. ಅವರು ಪರೀಕ್ಷೆಗೆ ಹಾಜರಾಗುತ್ತಾರೆ. ಆದರೆ ಫೈಲ್ ಆಗುತ್ತಾರೆ. ಅದಕ್ಕಾಗಿ ರಿವ್ಯಾಲ್ಯುವೇಷನ್ ಗೆ ಹಾಕುತ್ತಾರೆ. ಅಲ್ಲಿ ಅವರನ್ನು ಪಾಸು ಮಾಡಿಸಲಾಗುತ್ತದೆ. ಅಂತಹ ಒಂದು ಜಾಲವೇ ಸಕ್ರೀಯವಾಗಿ ಕೆಲಸ ಮಾಡುತ್ತಿದೆ. ಪ್ರಮುಖ ರಾಜಕಾರಣಿಯೊಬ್ಬರು ಈ ಜಾಲದ ಹಿಂದಿದ್ದಾರೆ ಎನ್ನಲಾಗುತ್ತಿದ್ದಾರೆ.
ಮೇಲಿನ ವಿಷಯ ಬಿಡಿ; ಕಳೆದ ಅಲ್ಲ ಅದಕ್ಕೂ ಹಿಂದಿನ ವಾರ ಕರ್ನಾಟಕ ಮತ್ತು ಅಂಧ್ರ ಗಡಿ ವಿವಾದದ ಬಗ್ಗೆ ಓಬಳಾಪುರ ಗಣಿಗಾರಿಕೆ ಕುರಿತಂತೆ ಕೇಂದ್ರ ಸರ್ವೆ ತಂಡ ಆಗಮಿಸಿದ ಬಗ್ಗೆ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿತ್ತು. ಆದರೆ ನಿಜ ವಿಷಯ ಏನೆಂದರೆ; ಸರ್ವೆ ತಂಡ ಬಂದದ್ದು ನಿಜ,ಆದರೆ ಅದು ಬಂದಿದ್ದು ಅಂದ್ರದ ಎರಡು ಗಣಿಗಳ ನಡುವಿನ ಬಿಕ್ಕಟ್ಟು ಪರಿಶೀಲನೆಗೆ. ಪತ್ರಕರ್ತರು ಕೌಂಟರ್ ಚೆಕ್ ಮಾಡಬೇಡವೇ?
ಮೊನ್ನೆ ಗೋವಿಂದರಾಜನಗರ ಉಪಚುನಾವಣೆ ನಡೆಯಿತ್ತಲ್ಲಾ... ಬಹಿರಂಗ ಪ್ರಚಾರ ನಡೆದ ಸಂಜೆ ೬ ಘಂಟೆಗೆ ಸುವರ್ಣ ಚಾನಲ್ ನಲ್ಲಿ ಕಾಂಗ್ರೇಸ್ ಅಬ್ಯರ್ಥಿ ಪ್ರಿಯಾಕೃಷ್ಣನ ಸಂದರ್ಶನ ಪ್ರಸಾರ ಆರಂಭವಾಗಿತ್ತು. ಸುಂದರವಾದ ಸಂದರ್ಶಕಿ ಪ್ರಶ್ನೆ ಹಾಕುತ್ತಿದ್ದಳು. ಸ್ವಲ್ಪ ಹೊತ್ತಿನಲ್ಲಿ ಟೀವಿ ಪರದೆಯ ಮೇಲೆ ಪ್ರಾಯೋಜಿತ ಕಾರ್ಯಕ್ರಮ ಎಂಬ ಮಾಹಿತಿ ಮೂಡಿಬಂತು. ಅದಾದ ಸ್ವಲ್ಪ ಹೊತ್ತಿನಲ್ಲಿ ಕಾರ್ಯಕ್ರಮವೇ ನಿಂತು ಹೋಗಿ ಬೇರೆ ಕಾರ್ಯಕ್ರಮ ಬಂತು. ಅಲ್ಲಿ-ಇಲ್ಲಿ ವಿಚಾರಿಸಿದಾಗ ಪೇಪರುಗಳನ್ನು ಸೆಂಟಿಮೀಟರ್ ಗಳಲ್ಲಿ ಖರೀದಿ ಮಾಡಿ ಸುದ್ದಿಗಳನ್ನು ಪ್ರಚಾರ ಮಾಡಿದ ಹಾಗೆ ಸುವರ್ಣ ನ್ಯೂಸ್ ಚಾನಲ್ ನ ಅರ್ಧ ಘಂಟೆಯ ಸ್ಲಾಟ್ ಪರ್ಚೇಸ್ ಮಾಡಿದ್ದರು. ಆದರೆ ’ಪ್ರಾಯೋಜಿತ’ ಎಂಬ ಸ್ಟಿಕ್ಕರ್ ಬಂದಾಗ ಅವರು ಹಿಂತೆಗೆದರು. ಯಾಕೆಂದರೆ ಚುನಾವಣಾ ಆಯೋಗ ಅದಕ್ಕೂ ಲೆಖ್ಖ ಕೇಳುತ್ತೆ.
ಮುಂದೆ ನಡೆದ ಬೆಳವಣಿಗೆಗಳು ಟಾಬ್ಲಾಯ್ಡ್ ಪತ್ರಿಕೆಗಳಿಗೆ ಲೇಖನವಾಗಬಲ್ಲುದು. ಕಾಂಗ್ರೇಸ್ ಸಂಪರ್ಕಿಸಿದ್ದು ಟೀವಿ೯ ಚಾನಲ್ ಇರಬಹುದೇ? ಯಾಕೆಂದರೆ ಮರುದಿನದಿಂದಲೇ ಬಿಜೇಪಿ ಅಭ್ಯರ್ಥಿ ಸೋಮಣ್ಣನ ವಿರೋಧಿ ನ್ಯೂಸ್ ಗಳು ಮತ್ತೆ ಮತ್ತೆ ಟೀವಿ ೯ನಲ್ಲಿ ಪ್ರಸಾರಗೊಂಡವು.
ಇದನ್ನೆಲ್ಲಾ ಪತ್ರಕರ್ತನಾದವನು ಗಮನಿಸುತ್ತಿರಬೇಕು. ಟೀವಿ ಚಾನಲ್ ಗಳಲ್ಲಿ ಬರೆಯಲು ಬರುವವರು ಕಡಿಮೆ. ವಾರ್ತಾವಾಚಕಿಯರು ಗೊಂಬೆಗಳು. ಬರೆದ್ದದ್ದನ್ನಷ್ಟೇ ಓದುತ್ತಾರೆ. ಕ್ಯಾಮರವೇ ಬಹಳಷ್ಟನ್ನು ಹೇಳುತ್ತದೆ. ದಿನಪತ್ರಿಕೆಗಳು ಸುದ್ದಿಯನ್ನಷ್ಟೇ ನೀಡುತ್ತವೆ. ನಿನ್ನೆ ಟೀವಿಯಲ್ಲಿ ನೋಡಿದ್ದಷ್ಟೇ ವಿವರಗಳು ಇಂದು ಪತ್ರಿಕೆಯಲ್ಲಿ ಬರುವುದಾದರೆ ಪತ್ರಿಕೆಗಳು ಯಾಕೆ ಬೇಕು? ಸುದ್ದಿಯಾಚೆಗಿನ ಸುದ್ದಿ ನಮಗೆ ಬೇಕು- ’ಬಿಯಾಂಡ್ ದಿ ನ್ಯೂಸ್’ ಅದು ಇಂದಿನ ಅಗತ್ಯ.
ಬಿಯಾಂಡ್ ದಿ ನ್ಯೂಸ್ -ಇಂದಿನ ಅಗತ್ಯ
Posted by
Nishada Kanjari
on Tuesday, August 25, 2009
/
Comments: (1)
ಶಶಿಧರ್ ಭಟ್ v/s ರಂಗನಾಥ ಸಂಕೇತಿ
Posted by
Nishada Kanjari
on Thursday, August 13, 2009
/
Comments: (0)
ಸುವರ್ಣ ನ್ಯೂಸ್ ಚಾನಲ್ ನ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕನ್ನಡ ಪ್ರಭದ ಎಚ್. ಆರ್ ರಂಗನಾಥ್ ನೇಮಕಗೊಂಡಿದ್ದಾರೆ. ಇದುವರೆಗೆ ಸುವರ್ಣ ನ್ಯೂಸ್ ಚಾನಲ್ ನ ಸುದ್ದಿ ವಿಭಾಗದ ಮುಖ್ಯಸ್ಥರಾಗಿದ್ದ ಶಶಿಧರ್ ಭಟ್ ಗೆ ಪ್ರಮೋಶನ್ ನೀಡಿ ಜ್ಯುಪಿಟರಿಗೆ ಕರೆಸಿಕೊಳ್ಳಲಾಗಿದೆ. ಜ್ಯುಪಿಟರ್, ಸುವರ್ಣ ನ್ಯೂಸ್ ಚಾನಲ್ ನ ಮಾಲಕರಾದ ಸಂಸದ ರಾಜೀವ್ ಚಂದ್ರಶೇಖರವರ ಬ್ಯುಸಿನೆಸ್ ಜಾಲದ ಕೇಂದ್ರ ಆಡಳಿತ ಸಂಸ್ಥೆ. ಭವಿಷ್ಯದಲ್ಲಿ ಈ ಸಂಸ್ಥೆಯಿಂದ ಆರಂಭವಾಗಲಿರುವ ಕನ್ನಡ ದಿನ ಪತ್ರಿಕೆಯ ಜವಾಬ್ದಾರಿ ಭಟ್ಟರದೇ.
ಸುವರ್ಣ ಚಾನಲ್ ಆರಂಭವಾಗಿ ಎರಡೂವರೆ ವರ್ಷಗಳಷ್ಟೇ ಉರುಳಿವೆ. ಬಹುಶಃ ನ್ಯೂಸ್ ಚಾನಲ್ ಗೆ ಒಂದು ವರ್ಷ. ಯಾವಾಗಲೂ ಒಂದು ಸಂಸ್ಥೆಯನ್ನು ಕಟ್ಟುವುದು ಕಷ್ಟದ ಕೆಲಸ. ಅದು ಬಟ್ಟ ಬಯಲಲ್ಲಿ ದಿಕ್ಕು ಕಾಣದೆ ನಿಂತಂತೆ. ಒಳ್ಳೆಯ ಪೌಂಡೇಶನ್ ಹಾಕಿ ಕಟ್ಟಡ ನಿರ್ಮಿಸಿದಂತೆ. ಕಟ್ಟಿದ ಮೇಲೆ ಅದಕ್ಕೆ ಸುಣ್ಣ ಬಣ್ಣ ಬಳಿಯುವ ಕೆಲಸ ಯಾರು ಬೇಕಾದರು ಮಾಡಬಹುದು. ಮಹಡಿ ಕೂಡ ಕಟ್ಟಬಹುದು. ಈಗ ಸುಣ್ಣ ಬಣ್ಣ ಬಳಿಯುವ, ಮಹಡಿ ಕಟ್ಟುವ ಕೆಲಸಕ್ಕೆ ರಂಗನಾಥ್ ಬರುತ್ತಿದ್ದಾರೆ. ಇದರ ಬಗ್ಗೆ ಹಲವಾರು ಬ್ಲಾಗ್ ಗಳಲ್ಲಿ ಈಗಾಗಲೇ ಚರ್ಚೆ ನಡೆದಿದೆ. ವಿಮರ್ಶಕಿ ಮೊದಲು ಬರೆದಳು. ನಂತರ ಸುದ್ದಿಮಾತು ಬರೆಯಿತು. ಸ್ವತಃ ಭಟ್ಟರೇ ತಮ್ಮ ಬ್ಲಾಗ್ ’ಕುಮ್ರಿ’ಯಲ್ಲಿ ಬರೆದುಕೊಂಡರು. ನಾನು ನನ್ನ ಪರಿಚಯದಲ್ಲೇ ಹೇಳಿಕೊಂಡಂತೆ ಅಲೆಮಾರಿ. ಎಲ್ಲೋ ತಿರುಗಾಡಲು ಹೋಗಿದ್ದೆ. ಬಂದೊಡನೆ ಇದನ್ನು ಬರೆಯಲಾರಂಭಿಸಿದೆ.ಉಳಿದ ಬ್ಲಾಗ್ ಗಳಲ್ಲಿ ಪ್ರಸ್ತಾಪವಾದ ಸಂಗತಿಗಳನ್ನು ನಾನು ಮತ್ತೆ ಪ್ರಸ್ತಾಪಿಸುವುದಿಲ್ಲ.
ನನಗೆ ತಿಳಿದು ಬಂದಂತೆ ರಂಗನಾಥ ಮತ್ತು ಶಶಿಧರ ಭಟ್ಟರ ಪರಿಚಯಕ್ಕೆ ಕಾಲು ಶತಮಾನದ ಇತಿಹಾಸವಿದೆ.ಅದು ಗೆಳೆತನವೂ ಆಗಿರಬಹುದು ಅಥವಾ ವೃತ್ತಿ ಬಂಧವೂ ಆಗಿರಬಹುದು. ಕೌಟುಂಬಿಕ ಸೇಹವೂ ಆಗಿರಬಹುದು. ಹೀಗೆ ಸಂಶಯ ಪಡಲು ಕಾರಣವಿದೆ. ಬ್ಯಾಚುಲರ್ ಬದುಕಿನಲ್ಲಿ ಶಶಿಧರ್ ಮತ್ತು ರಂಗನಾಥ್ ಒಂದೇ ಮನೆಯಲ್ಲಿದ್ದರು. ಭಟ್ಟರು ಮದುವೆಯಾದ ಮೇಲೂ ರಂಗನಾಥ ಅದೇ ಮನೆಯಲ್ಲಿ ಸ್ವಲ್ಪ ಕಾಲ ಇದ್ದರು.
ಶಶಿಧರ್ ಭಟ್ ಕೆಲಸ ಮಾಡುತ್ತಿದ್ದ ಕನ್ನಡ ಪ್ರಭಕ್ಕೆ ರಂಗನಾಥ್ ಕ್ರೈಮ್ ರಿಪೋರ್ಟರ್ ಆಗಿ ಸೇರಿಕೊಂಡವರು. ಕ್ರಮೇಣ ಮ್ಯಾನೇಜ್ ಮೆಂಟಿಗೆ ಹತ್ತಿರವಾಗತೊಡಗಿದರು. ಶಶಿಧರ್ ಭಟ್ಟರ ಮುಖ್ಯವರದಿಗಾರನ ಹುದ್ದೆ ಮೇಲೆ ರಂಗನಾಥ್ ಕಣ್ಣು ಬಿತ್ತು. ಭಟ್ಟರು ಏನು ಮಾಡುವುದೆಂದು ತೋಚದೆ ಒದ್ದಾಡುತ್ತಿರುವಾಗ ಅವರಿಗೆ ಎಷ್ಯಾನೆಟ್ ಚಾನಲ್ ನಿಂದ ಕರೆ ಬಂತು. ’ಕಾವೇರಿ’ ಚಾನಲ್ ಭಟ್ಟರು ಕಟ್ಟಿದರು. ಅದು ಬಾಗಿಲು ಮುಚ್ಚಿದ ಮೇಲೆ ಸ್ವಂತ ಪ್ರೋಡಕ್ಷನ್ ಹೌಸ್ ಆರಂಭಿಸಿದರು. ಕಾವೇರಿಯನ್ನು ಕಟ್ಟಿಕೊಂಡು ಭಟ್ಟರು ಒಬ್ಬರೇ ಹೆಣಗಾಡಿದ್ದನ್ನು ಮರೆಯದ ಏಷ್ಯಾನೆಟ್ ಆಡಳಿತ ಮಂಡಳಿ ಮತ್ತೆ ಅವರನ್ನು ಸುವರ್ಣಕ್ಕೆ ಕರೆಸಿಕೊಂಡಿತು. ಸುವರ್ಣ ಉಳಿದ ಚಾನಲ್ ಗಳ ಜೋತೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಬೆಳೆಯತೊಡಗಿತು. ಉತ್ತೇಜಿತರಾದ ಮ್ಯಾನೇಜ್ ಮೆಂಟ್ ಸುವರ್ಣ ನ್ಯೂಸ್ ಚಾನಲ್ ಆರಂಬಿಸಿತು. ಅದು ಕೂಡ ಉಳಿದೆರಡು ಚಾನಲ್ ಗಳ ಮಧ್ಯೆ ತನ್ನ ಕ್ರೆಡಿಬಿಲಿಟಿಯನ್ನು ಕಾಯ್ದುಕೊಂಡಿತು. ಆದರೆ ಟಿ.ಆರ್.ಪಿ ಏರಲಿಲ್ಲ. ಭಟ್ಟರ ಕುರ್ಚಿಯ ಮೇಲೆ ರಂಗನಾಥನ ಕಣ್ಣು ಬಿತ್ತು.
ಶಶಿಧರ್ ಮತ್ತು ರಂಗನಾಥನ ಗುಣ ಸ್ವಭಾವವನ್ನು ಸ್ವಲ್ಪ ವಿಶ್ಲೇಷಿಸಿದರೂ ಸಾಕು ಯಾಕೆ ಹೀಗಾಗುತ್ತದೆ ಎಂಬುದು ಗೊತ್ತಾಗಿಬಿಡುತ್ತದೆ. ಶಶಿಧರ್ ಗುಂಪುಗಾರಿಕೆ ಮಾಡುವವರಲ್ಲ. ತನಗನ್ನಿಸಿದ್ದನ್ನು ಒಬ್ಬಂಟಿಯಾಗಿಯೇ ಮಾಡುತ್ತಾರೆ; ಎದುರಿಸುತ್ತಾರೆ. ಅದು ತನ್ನ ಮೇಲಿರುವ ಅತಿಯಾದ ನಂಬಿಕೆಯೂ ಇರಬಹುದೇನೋ. ಹತ್ತಾರು ಪತ್ರಿಕೆಗಳನ್ನು ಹತ್ತಿಳಿದು ಇಲೆಕ್ಟ್ರಾನಿಕ್ ಮಾಧ್ಯಮಕ್ಕೆ ಬಂದವರು. ಹಾಗೆ ಪಥ ಬದಲಿಸಿದಾಗಲೆಲ್ಲ ವಾರಗಟ್ಟಲೆ ನಿದ್ದೆ ಮಾಡುತ್ತಾ, ಪಾನ್ ಜಗಿದುಕೊಂಡು, ಫಿಲಾಸಪಿ ಬುಕ್ ಓದುತ್ತಾ ಕಾಲ ಕಳೆಯುವ ಅಸಾಮಿ ಅವರು. ಕರಪ್ಟ್ ಆಲ್ಲ. ಅವರ ಮೇಲೆ ಆಪಾದನೆಗಳಿಲ್ಲ. ಆದರೆ ಸ್ನೇಹವನ್ನಾಗಲಿ, ಬಂಧುತ್ವವನ್ನಾಗಲಿ ಅಧಿಕಾರವನ್ನಾಗಲಿ ಸಂಭಾಳಿಸುವ ಕಲೆ ಗೊತ್ತಿಲ್ಲದವರು. ಹಾಗಾಗಿ ಅವರ ಹಿಂದೆ ’ಹೌದಪ್ಪ’ಗಳಿಲ್ಲ. ಅಪೀಸಿನಲ್ಲಿ ಯಾರಾದರೂ ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದಿದ್ದರೆ ಅವರನ್ನು ಸೌಮ್ಯವಾಗಿಯೇ ಗದರುತ್ತಾರೆ. ಅವರು ತಿದ್ದಿಕೊಳ್ಳದಿದ್ದರೆ ತಾವೇ ಅದನ್ನು ಮಾಡುತ್ತಾರೆ. ಕತ್ತೆ ದುಡಿದ ಹಾಗೆ ದುಡಿಯುತ್ತಾರೆ.ಅದು ಅವರ ದೌರ್ಬಲ್ಯವೂ ಹೌದು; ಶಕ್ತಿಯೂ ಹೌದು.
ರಂಗನಾಥ್ ಮಹತ್ವಾಕಾಂಕ್ಷಿ. ಮೈಸೂರಿನ ’ಮಹಾನಂದಿ’ ದಿನ ಪತ್ರಿಕೆಯಿಂದ ಪತ್ರಿಕಾರಂಗಕ್ಕೆ ಬಂದವರು. ವಿ. ಎನ್. ಸುಬ್ಬಾರಾವ್ ನೇತೃತ್ವದ’ ನಾವು-ನೀವು’ ವಾರಪತ್ರಿಕೆಯ ಮೂಲಕ ಬೆಂಗಳೂರಿಗೆ ಬಂದರು. ಅಲ್ಲಿಯೂ ಶಶಿಧರ್ ಭಟ್ಟರೇ ಮುಖ್ಯ ವರದಿಗಾರರಾಗಿದ್ದರು. ಅಲ್ಲಿಯೂ ರಂಗನಾಥ್ ಚಿಕ್ಕ ಪುಟ್ಟ ತರಲೆ ಮಾಡುತ್ತಿದ್ದರು. ತುಂಬಾ ಸುಂದರವಾಗಿ ಹೊರಬರುತ್ತಿದ್ದ ಆ ಪತ್ರಿಕೆ ಬಹು ಕಾಲ ಬಾಳಲಿಲ್ಲ. ಅನಂತರ ಶಶಿಧರ್ ಕನ್ನಡಪ್ರಭ ಸೇರಿದರು. ರಂಗನಾಥ್ ಇಂಗ್ಲಿಷ್ ಪತ್ರಿಕೆಗಳಿಗೆ ಬರೆಯುತ್ತಾ ಅಲ್ಲಿ- ಇಲ್ಲಿ ಓಡಾಡಿಕೊಂಡಿದ್ದರು. ಮುರ್ನಾಲ್ಕು ವರ್ಷಗಳ ನಂತರ ರಂಗನಾಥ್ ಕೂಡಾ ಕನ್ನಡ ಪ್ರಭ ಸೇರಿಕೊಂಡರು.
ಈಗ ಇತಿಹಾಸ ಮರುಕಳಿಸುತ್ತಿದೆ. ಭಟ್ಟರು ಕನ್ನಡಪ್ರಭ ಬಿಟ್ಟು ಹತ್ತು ವರ್ಷ ಕಳೆದಿದೆ. ಆದರೆ ಇನ್ನೂ ಅವರು ತಾಂತ್ರಿಕವಾಗಿ ಅಲ್ಲಿಯ ಉದ್ಯೋಗಿಯೇ. ಯಾಕೆಂದರೆ ಅವರ ಅಕೌಂಟ್ ಇನ್ನೂ ಸೆಟ್ಲಾಗಿಲ್ಲ.
ಭಟ್ಟರ ಹಾಗೆ ರಂಗನಾಥ್ ಸೌಮ್ಯ ಅಲ್ಲ. ಅವರೊಬ್ಬ ಡಿಕ್ಟೇಟರ್. ತನ್ನ ಸಬಾರ್ಡಿನೇಟರನ್ನು ಸದಾ ಮುಷ್ಟಿಯಲ್ಲಿಟ್ಟುಕೊಳ್ಳಲು ಬಯಸುತ್ತಾರೆ. ಒಂದು ಉದಾಹರಣೆಯನ್ನು ಕೊಡುತ್ತೇನೆ. ಕಳೆದ ಚುನಾವಣೆಯಲ್ಲಿ ಕನ್ನಡಪ್ರಭದ ಹಿರಿಯ ವರದಿಗಾರರೊಬ್ಬರನ್ನು ಟೀವಿ ಚಾನಲ್ಲೊಂದು ಡಿಸ್ಕಷನ್ ಗೆ ಕರೆದಿತ್ತು. ಆದರೆ ಅವರು ಬರಲಿಲ್ಲ. ಯಾಕೆಂದರೆ ಟೀವಿ ಡಿಸ್ಕಷನ್ ಗೆ ಹೋಗಬಾರದೆಂದು ಸಂಪಾದಕರ ಅಪ್ಪಣೆಯಾಗಿತ್ತಂತೆ.
ಒಂದು ಪತ್ರಿಕೆಯ ಸಂಪಾದಕರಾಗಿದ್ದರೂ ಸಂಪಾದಕಿಯ ಬರೆಯದ ಸಂಪಾದಕರು ಅವರು. ಆದರೆ ತಮ್ಮ ಸುತ್ತ ಹೊಗಳು ಭಟ್ಟರ ಪಡೆಯೊಂದನ್ನು ಕಟ್ಟಿಕೊಂಡಿರುತ್ತಾರೆ. ತಮ್ಮ ಮೇಲೆಯೇ ನಂಬಿಕೆಯಿಲ್ಲದ, ಕೀಳರಿಮೆಯಿಂದ ಬಳಲುತ್ತಿರುವ ವ್ಯಕ್ತಿಗಳು ಹೀಗಿರುತ್ತಾರೆ. ಅವರು ಯಾರನ್ನೂ ನಂಬುವುದಿಲ್ಲ. ನಂಬಿದಂತೆ ನಟಿಸುತ್ತಾರೆ. ಸುಳ್ಳು ಆಶ್ವಾಸನೆಗಳನ್ನು ಕೊಡುತ್ತಾರೆ. ಅದಕ್ಕೆ ಇರಬಹುದು ರಂಗನಾಥರಿಗೆ ಪತ್ರಿಕೋಧ್ಯಮದಲ್ಲಿ ’ರೀಲ್ ರಂಗ’ ಎಂಬ ಹೆಸರಿದೆ. ಬಹುಶಃ ಈ ಗುಣಗಳೇ ರಾಜೀವ್ ಚಂದ್ರಶೇಖರ್ ನ್ನು ಮರಳು ಮಾಡಿರಬಹುದು. ’ಸೆಲ್ಫ್ ಮಾರ್ಕೇಟಿಂಗ್’ ಎಂಬುದು ರಂಗನಾಥರ ಗುಣ ವಿಶೇಷ. ಆದರೆ ಅದು ಟೀವಿ ಮುಂದೆ ನಡೆಯದು. ಕ್ಯಾಮರ ಎಲ್ಲವನ್ನೂ ಬಿಚ್ಚಿಡುತ್ತದೆ. ಡಿಷ್ಕಷನ್ ನಲ್ಲಿ ನೀವು ಗಮನಿಸಿರಬಹುದು.ಅವರು ಕ್ಯಾಮರ ನೋಡಿ ಮಾತಾಡುವುದಿಲ್ಲ; ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ. ಆದರೆ ಟೀವಿಗೆ ಅದೇ ಮುಖ್ಯ.
ಈಗ ರಂಗನಾಥ್ ಸುವರ್ಣ ನ್ಯೂಸ್ ಚಾನಲ್ ಅನ್ನು ನಂ.ಒಂದು ಚಾನಲ್ ಮಾಡಲು ಹೊರಟಿದ್ದಾರೆ. ರವಿ ಹೆಗಡೆ ಎಂಬ ಪೇಜ್ ಲೇಔಟ್ ಅರ್ಟಿಸ್ಟ್, ಜೋಗಿ-ಉದಯಮರಕಿಣಿ ಎಂಬ ಸಿನಿಮಾ ಬರಹಗಾರರು ಅವರ ಹಿಂದೆ ಹೊರಟು ನಿಂತಿದ್ದಾರೆ. ವಿಜಯ ಕರ್ನಾಟಕದ ಆರ್ಟಿಸ್ಟ್ ಒಬ್ಬರು ರಂಗನಾಥ್ ಬಳಗ ಸೇರಲು ರಾಜಿನಾಮೆ ಕೊಟ್ಟರಂತೆ ಎಂಬ ಸುದ್ದಿ ದಟ್ಟವಾಗಿ ಹರಡಿದ್ದು ಹಾಗೆಯೇ ಕರಗಿ ಹೋಗಿದೆ. ಟೀವಿ೯ಗೂ ರಂಗನಾಥ್ ಬಲೆ ಬೀಸಿದ್ದಾರಂತೆ. ’ಮೊದಲು ನೀವು ಹೋಗಿ ಸ್ಟಾಂಡ್ ಆಗಿ ಆಮೇಲೆ ನೋಡೋಣ’ ಎಂದಿದ್ದಾರಂತೆ ರಂಗನಾಥ್ ಭಾರದ್ವಾಜ್. ಪ್ರಿಂಟ್ ಮೀಡಿಯಾದಿಂದ ಇಷ್ಟು ದೊಡ್ಡ ದಂಡು ಸುವರ್ಣಕ್ಕೆ ಹೋದರೆ ಅಲ್ಲೊಂದಷ್ಟು ಜನ ಕೆಲಸ ಕಳೆದುಕೊಳ್ಳಬಹುದು. ಸೀಮಿತ ಅವಕಾಶಗಳುಳ್ಳ ಕನ್ನಡ ಪತ್ರಿಕಾರಂಗ ಈ ಎಲ್ಲಾ ಬೆಳವಣಿಗೆಗಳನ್ನು ಕುತೂಹಲದಿಂದ ಗಮನಿಸುತ್ತಿದೆ.