Visitors

ಜನಶ್ರೀ ಎಂಬ ಆನೆಯೂ ಸುದ್ದಿಚಾನಲ್ ಗಳೆಂಬ ನಾಯಿಗಳೂ





ಮೇಲಿನ ಪೋಟೋ ಗಮನಿಸಿದ್ದೀರಾ? ಇದನ್ನು ನನ್ನ ಗೆಳೆಯನೊಬ್ಬ ನನಗೆ ಮೇಲ್ ಮಾಡಿದ್ದ. ಜೊತೆಗೆ ಆತ ಹೇಳಿದ; ಒರಿಜನಲ್ ಪೋಟೊದಲ್ಲಿ ಇಲ್ಲದ ಮೋಡಿಫೈಡ್ ಗ್ರಾಪಿಕ್ ಮಾಡಿದ್ದೇನೆ, ಖೆಡ್ಡಾ...ಹ್ಹ..ಹ್ಹಾ.. ಎಂದು ನಗಾಡಿದ.

ಇದನ್ನು ನೋಡಿ ನಿಮಗೇನನ್ನಿಸಿತೋ ಅದು ನನಗೆ ಗೊತ್ತಿಲ್ಲ. ಆದರೆ ಟೀವಿ೯ ಮುಖ್ಯಸ್ಥರಾಗಿರುವ ಮಹೇಂದ್ರ ಮಿಶ್ರಾ ಅವರಿಗೆ ಕಂಡಾಬಟ್ಟೆ ಸಿಟ್ಟು ಬಂದಿತ್ತು. ’ವೋ ಹಾತಿ ಹೈ ಕ್ಯಾ? ಹಮ್ ಕ್ಯಾ ಹೈ ಕುತ್ತಾ? ವೋ ಕ್ಯಾ ಸಮ್ಜತಾ ಹೈ?’ ಎಂದೆಲ್ಲಾ ರೇಗಾಡಿದ್ದರು.

ನನಗೆ ಆ ಹೊರ್ಡಿಂಗ್ಸ ಹಿಂದೆ ಕೆಲಸ ಮಾಡಿದ ಮನಸ್ಸುಗಳ ಬಗ್ಗೆ ಕುತೂಹಲ ಮೂಡಿತು. ಅವರು ಪ್ರಾಣಿಗಳನ್ನೇ ರೂಪಕಗಳನ್ನಾಗಿ ಯಾಕೆ ಆಯ್ಕೆ ಮಾಡಿಕೊಂಡರು? ಸರಿ, ’ಆನೆ ನಡೆದುದೇ ದಾರಿಯಲ್ತೆ’ ಎಂದು ಆದಿ ಕವಿ ಪಂಪ ಸಾವಿರ ವರ್ಷಗಳ ಹಿಂದೆಯೇ ಹೇಳಿದ್ದಾನೆ. ಕನ್ನಡದ ಮೂರ್ನಾಕು ಸುದ್ದಿ ಚಾನಲ್ ಗಳು ಈಗಾಗ್ಲೇ ಹಾದಿ ಮಾಡಿಕೊಂಡು ಬಹುದೂರ ಸಾಗಿ ಬಂದಾಗಿದೆ. ಜನಶ್ರೀ ಯಾವ ಹೊಸ ಹಾದಿಯನ್ನು ಮಾಡುತ್ತೆ?

ಜನಶ್ರೀ ಆನೆಯ ಅಹಂಕಾರ, ನಡಿಗೆಯ ಗತ್ತು ನೋಡಿ! ’ಸೈಡ್ ಪ್ಲೀಸ್’ ಎಂದು ಆನೆ ಯಾರಿಗೆ ಹೇಳುತ್ತೆ? ಅದು ನಡೆದು ಬರುತ್ತಿರುವ ದಾರಿಯಲ್ಲಿರುವ ಸಣ್ಣಪುಟ್ಟ ಶ್ವಾನಗಳಿಗೆ. ಆ ಶ್ವಾನಗಳ ಮೈ ಬಣ್ಣವನ್ನು ಗಮನಿಸಿ. ಅದು ಈಗಾಗಲೇ ಅಸ್ತಿತ್ವದಲ್ಲಿರುವ ಸುದ್ದಿ ಚಾನಲ್ ಗಳನ್ನು ಪ್ರತಿನಿಧಿಸುತ್ತೆ ಅಲ್ಲವೇ? ಅಲ್ಲಿ ಇನ್ನೂ ಹಲವು ನಾಯಿಗಳಿವೆ ಅವು ಪತ್ರಿಕೆಗಳಿರಬಹುದೇ? ಅಂದರೆ ಜನಶ್ರೀ ದೃಷ್ಟಿಯಲ್ಲಿ ಮಾದ್ಯಮದವರೆಲ್ಲ ನಾಯಿಗಳೇ? ಇಂಥ ಕೀಳುಮಟ್ಟದ ಅಭಿರುಚಿಯಿರುವವರನ್ನು ನಾವು ಯಾವ ಪ್ರಾಣಿಗೆ ಹೋಲಿಸಬಹುದು?

ಇಲ್ಲಿ ನನಗೆ ಇನ್ನೊಂದು ಕುತೂಹವಿದೆ. ಈ ಹೋರ್ಡಿಂಗ್ಸ್ ಅನ್ನು ರೂಪಿಸಿದವರಿಗೆ ಹೋಲಿಕೆಗೆ ನಾಯಿಯೇ ಯಾಕೆ ನೆನಪಾಯಿತು? ಈ ಭೂಮಿಯ ಮೇಲೆ ಅನೇಕ ಪ್ರಾಣಿಗಳಿವೆ. ಕತ್ತೆಯಿದೆ, ಕುದುರೆಯಿದೆ, ಹಂದಿಯಿದೆ, ಹೆಗ್ಗಣವಿದೆ, ಇಲಿಯಿದೆ....ಇದನ್ನೆಲ್ಲಾ ಬಿಟ್ಟು ನಾಯಿಯೇ ನೆನಪಾಗಬೇಕಾದರೆ ನಾಯಿಗೂ ಅವರಿಗೂ ಜನ್ಮ ಜನ್ಮಾಂತರದ ಸಂಬಂಧವಿರಲೇಬೇಕು. ಈ ಜನ್ಮದಲ್ಲಿಯೂ ಅವರು ಅನೇಕ ನಾಯಿಗಳನ್ನು ಸಾಕಿರಬೇಕು. ಅದಕ್ಕೆ ಕಾಲ ಕಾಲಕ್ಕೆ ರೊಟ್ಟಿ ಹಾಕಿ ಸಾಕುತ್ತಿರಬೇಕು. ಅವು ಕೂಡಾ ಸ್ವಾಮಿನಿಷ್ಠೆ ತೋರಿಸುತ್ತಿರಬೇಕು. ಸ್ವಾಮಿಜಿಯೊಬ್ಬರು ಪತ್ರಕರ್ತರನ್ನು ನಾಯಿಗಳೆಂದು ಕರೆದು ಇದನ್ನು ಪುಷ್ಟಿಕರಿಸಿದ್ದಾರೆ.ಪತ್ರಕರ್ತರು ಪ್ರಜಾಪ್ರಭುತ್ವದ ಕಾವಲು ನಾಯಿಗಳೆಂದು ತಲೆ ಮಾಸಿದ ಒಂದಷ್ಟು ಪತ್ರಕರ್ತರು ಬಡಬಡಿಸುತ್ತಿರುವುದು ಆನೆಯ ದಪ್ಪ ಚರ್ಮಕ್ಕೂ ತಾಗಿ ಅದು ’ಸೈಡ್ ಪ್ಲೀಸ್’ ಅನ್ನುತ್ತಿರಬಹುದೇ?

ಜನಶ್ರೀ ಹೆಸರಿನ ಬಗ್ಗೆನೇ ನನಗೆ ತಕರಾರು ಇದೇರಿ.. ಜನ ಅಂದರೆ ಜನತೆ, ಜನಸಾಮಾನ್ಯರು. ಶ್ರೀ ಅಂದರೆ ಸಂಪತ್ತು. ಜನಸಾಮಾನ್ಯರು ಮತ್ತು ಶ್ರೀಮಂತಿಕೆ ಹ್ಯಾಗ್ರಿ ಒಂದೇ ಕಡೆ ಸೇರುತ್ತೆ? ಇದೇ ಪೆದ್ದು ಪ್ರಶ್ನೆಯನ್ನು ನನ್ನ ಗೆಳೆಯನ ಮುಂದಿಟ್ಟೆ. ಅದಕ್ಕವನು, ಅಯ್ಯೋ ಪೆದ್ದೆ ಜನ ಅಂದ್ರೆ ಜನಾರ್ಧನ ರೆಡ್ಡಿ ಶ್ರೀ ಅಂದ್ರೆ ಶ್ರೀರಾಮುಲು ಅಂದ. ಓ ಅರ್ಥಗರ್ಭಿತವಾಗಿದೆ ನಾಮಧೇಯ, ಅವರಿಬ್ಬರು ಬರುತ್ತಿದ್ದರೆ ಮದಗಜಗಳು ಮೇಲೇರಿ ಬಂದಂತೆ ಎಂದು ನಾನೂ ನಕ್ಕೆ.

ನನ್ನ ಗೆಳೆಯ ಚಿತ್ರದಲ್ಲಿ ಖೆಡ್ಡ ಬಿಡಿಸಿದ. ನಿಜವಾದ ಖೆಡ್ಡಾ ತೋಡಬೇಕಾದವರು ಮೌನವಾಗಿದ್ದಾರೆ. ಮೌನಕ್ಕೆ ಅಪಾರ ಶಕ್ತಿ ಇದೆ ಎಂದು ನಂಬಿರುವವಳು ನಾನು. ಒಂದು ದಿನ ಆ ಶಕ್ತಿಯ ಸ್ಫೋಟ ಆಗಲೇ ಬೇಕು. ಈಗ ಆನೆ ಖೆಡ್ಡಾದಲ್ಲಿ ಬೀಳುತ್ತೋ ಇಲ್ವೋ ನನಗೆ ಗೊತ್ತಿಲ್ಲ. ಆದರೆ ಆಲ್ಲಿರುವ ಪತ್ರಕರ್ತರನ್ನು ಗಮನಿಸಿದರೆ ಅದು ಸಕ್ಕರೆಬೈಲಿಗೆ ಹೋಗುವುದರಲ್ಲಿ ಸಂಶಯವಿಲ್ಲ ಅನ್ನಿಸುತ್ತೆ. ಸಕ್ಕರೆಬೈಲ್ ಗೊತ್ತಲ್ಲಾ, ಆನೆ ತರಬೇತಿ ಕೇಂದ್ರ.

ಆನೆ ಭೂಮಿಯ ಮೇಲೆ ವಾಸಿಸುತ್ತಿರುವ ಅತಿ ದೊಡ್ಡ ಪ್ರಾಣಿ. ಅದು ಕಾಡಿನಲ್ಲಿರಲಿ, ನಾಡಿನಲ್ಲಿರಲಿ ಅದರ ವಿದ್ವಂಸಕ ಗುಣಗಳಿಂದಾಗಿ ಅದರ ಬಗ್ಗೆ ಜನರಿಗೆ ಒಂದು ರೀತಿಯ ಭಯ ಇದ್ದೇ ಇದೆ. ಅದಕ್ಕೆ ನೆಲ ಕಾಣಿಸುವುದಿಲ್ಲ. ಮದವೇರಿದ ಆನೆಯಂತೂ ತನ್ನೆದುರು ಸಿಕ್ಕಿದ್ದನ್ನೆಲ್ಲಾ ಧ್ವಂಸ ಮಾಡುತ್ತೆ. ಆದರೆ ನಾಯಿ ಹಾಗಲ್ಲ. ಅದು ನೆಲದ ಸಮೀಪ ಇರುತ್ತದೆ. ಬೀದಿ ನಾಯಾಗಿದ್ದರೂ ಅದು ಆ ಬೀದಿಗೆ ನಿಷ್ಠವಾಗಿರುತ್ತದೆ. ಸಾಕು ನಾಯಾಗಿದ್ದರೆ ಮಾಲೀಕನಿಗೆ ನಿಷ್ಠವಾಗಿರುತ್ತದೆ. ಮುಖ್ಯವಾಗಿ ನಾಯಿ ವಾಸನೆಯನ್ನು ಗ್ರಹಿಸುತ್ತದೆ. ಅದಕ್ಕಾಗಿಯೇ ಪೋಲಿಸ್ ಇಲಾಖೆಯಲ್ಲಿ ಅಪರಾದ ತನಿಖೆಗಾಗಿ ಶ್ವಾನದಳವಿದೆ. ಆದರೆ ಆನೆಗೆ ವಾಸನಾಗ್ರಹಿಕೆಯಿಲ್ಲ.

ಇದೆಲ್ಲಕ್ಕಿಂತಲೂ ಹೆಚ್ಚಾಗಿ ನಾಯಿಗೆ ಪ್ರೀತಿಸಲು ಬರುತ್ತದೆ. ಅದಕ್ಕೆ ಮನುಷ್ಯನ ಪ್ರೀತಿ ಬೇಕು; ಮನುಷ್ಯನಿಗೂ ಪ್ರೀತಿಸಲು ನಾಯಿ ಬೇಕು. ಆನೆಯಿಂದ ಇವೆರಡನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ.

0 comments:

Post a Comment