Visitors

ಪತ್ರಿಕೋದ್ಯಮದ ಬ್ರೂಟಸ್ ಗಳು



ಕಳೆದ ಸೋಮವಾರ ಕನ್ನಡಪ್ರಭದ ಸಂಪಾದಕರಾದ ಶಿವಸುಬ್ರಹ್ಮಣ್ಯ ಅವರು ಎಂದಿನಂತೆ ಬೆಳಿಗ್ಗೆ ೧೦ ಘಂಟೆಗೆ ಕೀನ್ಸ್ ರೋಡಿನಲ್ಲಿರುವ ತಮ್ಮ ಅಪೀಸಿಗೆ ಬಂದಿದ್ದಾರೆ. ಕಾರಿನಿಂದ ಇಳಿದು ರಿಸೆಪ್ಷನ್ ಹತ್ತಿರ ತಲುಪುವಾಗಲೇ ಅವರಿಗೆ ಗೊತ್ತಾಯಿತು. ಮೂರನೆಯ ಮಹಡಿಯಲ್ಲಿರುವ ತಮ್ಮ ಅಪೀಸಿನಲ್ಲಿ ಅದಾಗಲೇ ನೂತನ ಸಂಪಾದಕರಾದ ವಿಶ್ವೇಶರಭಟ್ಟರು ಎಡಿಟೋರಿಯಲ್ ಮೀಟಿಂಗ್ ನಡೆಸುತ್ತಿದ್ದಾರೆಂದು.

ತನ್ನ ಬೆನ್ನ ಹಿಂದೆಯೇ ಹೀಗೊಂದು ಸಂಚು ನಡೆಯುತ್ತಿದೆಯೆಂಬುದರ ಲವ ಲೇಶವೂ ಅರಿವಿಲ್ಲದ ಅವರಿಗದು ಷಾಕಿಂಗ್ ನ್ಯೂಸ್. ಆದರೂ ಸಾವರಿಸಿಕೊಂಡು ತಮ್ಮ ಚೇಂಬರಿಗೆ ಹೋದವರೇ ರಾಜಿನಾಮೆಯನ್ನು ಬರೆದು ಆಡಳಿತ ಮಂಡಳಿಯ ಮುಂದಿಟ್ಟರು. ರಾಜಿನಾಮೆಯನ್ನು ಒಪ್ಪಿಕೊಳ್ಳದ ಮನೋಜಕುಮಾರ್ ಸಂತಾಲಿಯ ಸಂಧಾನಕ್ಕಾಗಿ ವಿಶ್ವೇಶಭಟ್ಟರನ್ನೇ ಶಿವಸುಬ್ರಹ್ಮಣ್ಯರವರ ಚೆಂಬರಿಗೆ ನುಗ್ಗಿಸಿದರು. ಹವ್ಯಕ ಭಾಷೆಯಲ್ಲೇ ಮಾತು ಪ್ರಾರಂಭಿಸಿದ ಭಟ್ಟರು ಅವರನ್ನು ಒಲಿಸಿಕೊಳ್ಳವ ಪ್ರಯತ್ನ ಮಾಡತೊಡಗಿದರು. ನಂಬಿಕೆ ದ್ರೋಹದ ಕಡು ಕಹಿಯನ್ನುಂಡ ಶಿವಸುಬ್ರಹ್ಮಣ್ಯ ಅಲ್ಲಿಂದ ಎದ್ದು ಬಂದವರೇ ಯಾರಿಗೂ ಸಿಗದೆ ಭೂಗತರಾಗಿಬಿಟ್ಟರು. ಅವರ ಚೇಂಬರಿನಲ್ಲಿ ಅವರದೇ ಆದ ಕೆಲವು ವಸ್ತುಗಳಿದ್ದವು. ಮರುದಿನ ಬೆಳಿಗ್ಗೆ ಆರು ಘಂಟೆಗೆ ಆಪೀಸಿಗೆ ಹೋದವರೇ ಅದನ್ನೆಲ್ಲಾ ತಂದು ಮನೆಯಲ್ಲಿಟ್ಟು ಹೆಗಲ ಮೇಲೆ ಕ್ಯಾಮರಾ ತಗುಲಿಸಿಕೊಂಡು ವನ್ಯದಾಮವೊಂದರತ್ತ ಹೆಜ್ಜೆ ಹಾಕಿದರು.

ಕನ್ನಡಪ್ರಭದ ಸಂಪಾದಕ ಹೆಚ್.ಆರ್. ರಂಗನಾಥ್ ಮೂರು ಡಜನ್ ಪತ್ರಕರ್ತರ ಹಿಂಡನ್ನು ಹಿಂದಿಟ್ಟುಕೊಂಡು ಸುವರ್ಣ ನ್ಯೂಸ್ ಚಾನಲ್ ಗೆ ಗುಳೆ ಹೋದಾಗ ಇರುವ ಹುಡುಗರನ್ನೇ ಕಟ್ಟಿಕೊಂಡು ಪತ್ರಿಕೆಯನ್ನು ಜನಪರವಾಗಿ ಮುನ್ನಡೆಸಿದವರು ಇದೇ ಶಿವಸುಬ್ರಹ್ಮಣ್ಯ. ಹಾಗಾಗಿ ಮ್ಯಾನೇಜ್ಮೆಂಟ್ ತನ್ನ ಕೈ ಬಿಡಲಾರದೆಂದು ಅವರು ಬಲವಾಗಿ ನಂಬಿದ್ದರು. ನಂಬಿಕೆ ದ್ರೋಹ ನಡೆದುಹೋಯ್ತು. ಶತಮಾನದ ಇತಿಹಾಸವಿರುವ, ಸದಾ ವ್ಯವಸ್ಥೆಯ ವಿರುದ್ಧ ಹೋರಾಡುತ್ತಲೇ ಬಂದ ಪತ್ರಿಕೆಯೊಂದು ತನ್ನ ಮೌಲ್ಯಗಳನ್ನೆಲ್ಲಾ ಗಾಳಿಗೆ ತೂರಿತ್ತು.

ಅದುವರೆಗೆ ಕನ್ನಡಪ್ರಭದಲ್ಲಿ ಶೇ ೨೫ ರಷ್ಟು ಷೇರುಗಳನ್ನು ಹೊಂದಿದ್ದ ಸಂಸದ ರಾಜೀವ ಚಂದ್ರಶೇಖರ್ ಅವರು ಅಂದೇ ಇನ್ನೂ ಶೇ.೫೦ ಷೇರುಗಳನ್ನು ಖರೀದಿಸಿದ್ದರು. ಕನ್ನಡಪ್ರಭದಲ್ಲಿ ಶೇ ೭೫ರಷ್ಟು ಷೇರುಗಳನ್ನು ಹೊಂದಿದ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರಿಗೆ ತಮ್ಮ ಉದ್ಯಮವನ್ನು ವಿಸ್ತರಿಸುವ ’ಸ್ಟಾರ್’ ಪತ್ರಕರ್ತನ ಅವಶ್ಯಕತೆಯಿತ್ತು. ವಿಶ್ವೇಶಭಟ್ಟರಿಗೂ ನೆಲೆಯೊಂದು ಬೇಕಾಗಿತ್ತು.

ಇದು ವರ್ತಮಾನದ ವಿಚಾರ. ಭೂತಕಾಲದ ಘಟನೆಯೊಂದನ್ನು ನಿಮ್ಮ ಮುಂದಿಡುತ್ತಿದ್ದೇನೆ. ಇದೇ ರಾಜೀವ್ ಚಂದ್ರಶೇಖರ್ ಮಲೆಯಾಳಿ ಚಾನಲ್ ಏಷಿಯಾನೆಟ್ ಸಹಭಾಗಿತ್ವದಲ್ಲಿ ಕನ್ನಡದಲ್ಲಿ ಏಷಿಯಾನೆಟ್ ಸುವರ್ಣ ಎಂಬ ಮನೋರಂಜನಾ ಚಾನಲ್ ಆರಂಭಿಸಿದರು. ಈ ಹಿಂದೆ ಏಷಿಯಾನೆಟ್ ನಲ್ಲಿ ಕೆಲಸ ಮಾಡಿದ್ದ ಶಶಿಧರ್ ಭಟ್ ಆ ಚಾನಲ್ ಮುಖ್ಯಸ್ಥರಾದರು. ಅದು ಗುಣಮಟ್ಟದ ಕಾರ್ಯಕ್ರಮ ನೀಡತೊಡಗಿತು. ಇದರಿಂದ ಉತ್ತೇಜಿತರಾದ ಮ್ಯಾನೇಜ್ಮೆಂಟ್ ಆರೇ ತಿಂಗಳಲ್ಲಿ ಸುವರ್ಣ ಸುದ್ದಿವಾಹಿನಿ ಆರಂಭಿಸಿತು.

ರಾಜೀವ್ ಚಂದ್ರಶೇಖರ್ ಏಷಿಯಾನೆಟ್ ನಿಂದ ಸುವರ್ಣ ಚಾನಲ್ ಅನ್ನು ಖರೀದಿಸಿದರು. ಅನಂತರ ಸುವರ್ಣ ಮನೋರಂಜನಾ ಚಾನಲ್ ಅನ್ನು ಸ್ಟಾರ್ ಗ್ರೂಫ್ ಗೆ ಮಾರಿದರು.

ಅದು ೨೦೦೯ರ ಅಗಸ್ಟ್ ತಿಂಗಳ ಒಂದು ದಿನ ಎಂದಿನಂತೆ ಬೆಳಿಗ್ಗೆ ೯.೩೦ ಘಂಟೆಗೆ ಶಶಿಧರ್ ಭಟ್ ತಮ್ಮ ಅಪೀಸಿಗೆ ಬಂದಿದ್ದಾರೆ. ಚಾನಲ್ ಸಿ.ಇ.ಓ ಸಂಜಯ ಪ್ರಭು. ಶಶಿಧರ್ ಭಟ್ ಅವರನ್ನು ತಮ್ಮ ಚೇಂಬರಿಗೆ ಕರೆಸಿಕೊಂಡವರೇ ನಿಮ್ಮನ್ನು ಚೇರ್ಮನ್ ಅವರ ಮೀಡಿಯಾ ಅಡೈಸರ್ ಆಗಿ ನೇಮಕ ಮಾಡಲಾಗಿದೆ ಎಂದರು. ನಾನು ರಾಜಕಾರಣಿಯೊಬ್ಬರ ಅಧಿಕೃತ ಮೀಡಿಯಾ ಅಡೈಸರ್ ಆಗಿ ಕೆಲಸ ನಿರ್ವಹಿಸಲಾರೆ ಎಂದು ಆ ಹುದ್ದೆಯನ್ನು ಭಟ್ ನಿರಾಕರಿದ್ದಾರೆ. ಆಗ ಅವರನ್ನು ರಾಜೀವ್ ಚಂದ್ರಶೇಖರ್ ಅವರ ಎಲ್ಲಾ ವ್ಯವಹಾರಗಳ ಆಡಳಿತ ಕೇಂದ್ರವಾದ ಜ್ಯುಪಿಟರ್ ಗೆ ವರ್ಗಾವಣೆ ಪ್ರಸ್ತಾಪ ಮಾಡಿದ್ದಾರೆ. ಬದುಕು ನಿರ್ವಹಣೆಗೆ ಸಂಬಳವನ್ನೇ ನೆಚ್ಚಿಕೊಂಡಿದ್ದ ಭಟ್ಟರು ತಾತ್ಕಾಲಿಕವಾಗಿ ಅದನ್ನು ಒಪ್ಪಿಕೊಂಡಿದ್ದಾರೆ. ಆಗ ಅಸಲಿ ವಿಚಾರಕ್ಕೆ ಬಂದ ಸಂಜಯ ಪ್ರಭು ಸುವರ್ಣ ಸುದ್ದಿವಾಹಿನಿ ಮುಖ್ಯಸ್ಥರಾಗಿ ರಂಗನಾಥ್ ಬರುತ್ತಿದ್ದಾರೆಂಬ ಸುದ್ದಿ ಬಹಿರಂಗ ಪಡಿಸಿದ್ದಾರೆ. ಬಟ್ಟರಿಗದು ಶಾಕಿಂಗ್ ನ್ಯೂಸ್; ಎರಡೂ ಕಡೆಯಿಂದಲೂ. ಮ್ಯಾನೇಜ್ಮೆಂಟ್ ಎಂದೂ ನೌಕರರ ಪರವಾಗಿರಲಾರದು. ಆದರೆ ತಮ್ಮ ಮನೆಯಲ್ಲಿ ಒಂದಷ್ಟು ಕಾಲ ಇದ್ದ ಹುಡುಗ ತಮಗೊಂದು ಮಾತೂ ಹೇಳಲಿಲ್ಲ ಎಂಬ ನೋವು ಅವರಿಗುಂಟಾಯಿತು. ಈ ಶಾಕಿನಲ್ಲಿರುವಾಗಲೇ ಸಂಜಯ ಪ್ರಭು ಇನ್ನೊಂದು ಮಾತು ಸೇರಿಸಿದರು, ’ಇಂದು ನೀವು ಮನೆಗೆ ಹೊರಟು ಬಿಡಿ. ರಂಗನಾಥ್ ಮದ್ಯಾಹ್ನದ ಮೇಲೆ ಅಧಿಕಾರ ವಹಿಸಿಕೊಳ್ಳಲು ಬರುತ್ತಿದ್ದಾರೆ. ನಿಮ್ಮ ಮುಖವನ್ನು ನೋಡಲು ಅವರು ಇಷ್ಟಪಡಲಾರರು.’

ಭವಿಷ್ಯದಲ್ಲಿ ಸಂಭವಿಸಬಹುದಾದ ಒಂದು ಘಟನೆಯ ಬಗ್ಗೆ ಹೇಳುತ್ತೇನೆ. ಉದಯವಾಣಿಯ ಸಂಪಾದಕರಾಗಿ ಇದೇ ಎಚ್.ಆರ್.ರಂಗನಾಥ್ ಅವರ ಶಿಷ್ಯ, ಕನ್ನಡಪ್ರಭದ ಮಾಜಿ ನೌಕರ, ಸುವರ್ಣದ ಹಾಲಿ ನೌಕರ ರವಿಹೆಗ್ಡೆ ನೇಮಕವಾಗಿದ್ದಾರೆಂದು ಕನ್ನಡಪ್ರಭದ ಮಾಜಿ ನೌಕರ ಸುವರ್ಣ ಸುದ್ದಿವಾಹಿನಿಯ ಹಾಲಿ ನೌಕರ ಜೋಗಿಯವರು ಪೇಸ್ ಬುಕ್ಕಿನಲ್ಲಿ ಬರೆದುಕೊಂಡಿದ್ದಾರೆ. ಆದರೆ ಈ ಸುದ್ದಿ ಉದಯವಾಣಿಯ ಹಾಲಿ ಸಂಪಾದಕ ತಿಮ್ಮಪ್ಪ ಭಟ್ಟರಿಗೆ ಗೊತ್ತೇ ಇಲ್ಲ. ಆಡಳಿತ ಮಂಡಳಿಯವರು ಅವರಿಗೆ ಇದುವರೆಗೆ ಏನನ್ನೂ ಹೇಳಿಲ್ಲ. ಅಂದರೆ ಒಂದು ದಿನ ಭಟ್ಟರು ಕೂಡಾ ಮೌನವಾಗಿ ಉದಯವಾಣಿಯ ಮೆಟ್ಟಲಿಳಿದು ಬರಬೇಕಾಗಿದೆ.

ಪ್ರತಿಯೊಂದು ಹುದ್ದೆಗೂ ಒಂದು ಸ್ಥಾನ ಗೌರವ ಅನ್ನುವುದಿದೆ. ರಾಜ್ಯಪಾಲರಿರಲಿ, ಸ್ಪೀಕರ್ ಇರಲಿ, ಮುಖ್ಯಮಂತ್ರಿಗಳಿರಲಿ, ನ್ಯಾಯಸ್ಥಾನದಲ್ಲಿ ಕುಳಿತುಕೊಳ್ಳುವ ನ್ಯಾಯಮೂರ್ತಿಗಳಾಗಲಿ, ಒಂದು ಸುದ್ದಿ ಚಾನಲ್ ಮುಖ್ಯಸ್ಥರಿರಲಿ ಅಥವಾ ಪತ್ರಿಕೆಯ ಸಂಪಾದಕರಿರಲಿ ಆ ಸ್ಥಾನದಲ್ಲಿ ಕುಳಿತಾಗ ಅವರು ಕೇವಲ ಒಬ್ಬ ವ್ಯಕ್ತಿಯಾಗಿರುವುದಿಲ್ಲ. ಆ ಹುದ್ದೆಯಲ್ಲಿ ಕುಳಿತು ಕೈಗೊಳ್ಳುವ ತೀರ್ಮಾನಗಳು ನೇರವಾಗಿ ಸಮಾಜದ ಮೇಲೆ ಪರಿಣಾಮ ಬೀರುವಂತದ್ದಾಗಿರುತ್ತದೆ. ಹಾಗಾಗಿ ಒಬ್ಬರನ್ನು ಆ ಸ್ಥಾನಕ್ಕೆ ಎಷ್ಟು ಗೌರವದಿಂದ ಬರಮಾಡಿಕೊಳ್ಳುತ್ತೇವೆಯೋ ಅಷ್ಟೇ ಗೌರವದಿಂದ ಅವರನ್ನು ಬೀಳ್ಕೊಡಬೇಕು. ವಿಜಯ ಕರ್ನಾಟಕದ ಸಂಪಾದಕರಾಗಿದ್ದ ವಿಶ್ವೇಶಭಟ್ಟರ ಮೇಲೆ ಆರೋಪಗಳ ಸರಮಾಲೆ ಇದ್ದರೂ ಟೈಮ್ಸ್ ಗ್ರೂಪಿನವರು, ಭಟ್ಟರು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳುತ್ತಿದ್ದಾರೆಂದು ಅವರನ್ನು ಗೌರವದಿಂದ ಬೀಳ್ಕೊಟ್ಟರು. ಅದು ಎಲ್ಲರಿಗೂ ಯಾಕೆ ಸಾಧ್ಯವಾಗುತ್ತಿಲ್ಲ? ಹುದ್ದೆಯ ಗೌರವ ಮತ್ತು ಜವಾಬ್ದಾರಿಯ ಅರಿವಿಲ್ಲದ ಹುಂಬರು ಮಾತ್ರ ರಾಜ್ಯಪಾಲರಿಗೆ ಕಪಾಳ ಮೋಕ್ಷ ಮಾಡುವ ಮಾತಾಡುತ್ತಾರೆ. ಅದು ಕೂಡ ಪ್ರತಾಪ ಸಿಂಹ ಎಂಬ ಯುವಪತ್ರಕರ್ತನ ಬಾಯಿಯಿಂದ ಉದುರುತ್ತದೆ. ಅವರ ಅಭಿಮಾನಿಗಳು ರಾಜ್ಯಪಾಲರನ್ನು ಅರಬ್ಬಿಸಮುದ್ರಕ್ಕೆ ಎಸೆಯಿರಿ, ತಲೆಕೆಟ್ಟಿದೆ ಕಂಕನಾಡಿಗೆ ಸೇರಿಸಿ, ಈಡಿಯೆಟ್ ಎಂದೆಲ್ಲಾ ಪ್ರತಾಪಸಿಂಹರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇದನ್ನೆಲ್ಲಾ ಗಮನಿಸುತ್ತಿದ್ದರೆ ವಿಶ್ವೇಶಭಟ್ಟರು ಎಂತಹ ತಳಿಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ದಿಗಿಲಾಗುತ್ತದೆ.

ಪತ್ರಿಕೋದ್ಯಮದ ಇತ್ತೀಚೆಗಿನ ಬೆಳವಣಿಗೆಗಳ ಬಗ್ಗೆ ಬರೆಯುತ್ತಾ ಹೋದರೆ ಅದೊಂದು ರಾಮಾಯಣವಾದೀತು! ಇಲ್ಲಿ ಕೊರಳ ಗೆಳೆಯರಾಗಿದ್ದವರು ಜನ್ಮ-ಜನ್ಮಾಂತರದ ವೈರಿಗಳಂತೆ ಪರಸ್ಪರ ಕೆಸರೆರೆಚಾಟದಲ್ಲಿ ತೊಡಗುತ್ತಾರೆ. ಪತ್ರಕರ್ತರು ಮನೆ, ಸೈಟ್, ಲ್ಯಾಪ್ ಟ್ಯಾಪ್, ಕಾರು, ತಿಂಗಳ ಪೇಮೆಂಟ್ ಗಳಿಗೆ ತಮ್ಮನ್ನು ಮಾರಿಕೊಳ್ಳುತ್ತಿದ್ದಾರೆ.

ಇದನ್ನೆಲ್ಲಾ ಗಮನಿಸುತ್ತಿರುವಾಗ ಇವರು ಭಾವಿ ಪತ್ರಕರ್ತರಿಗೆ ಯಾವ ರೀತಿಯಲ್ಲಿ ಮಾದರಿಗಳಗುತ್ತಿದ್ದಾರೆ? ಯಾವ ಮೌಲ್ಯಗಳನ್ನು ಬಿಟ್ಟು ಹೋಗುತ್ತಿದ್ದಾರೆ ಎಂಬುದನ್ನು ಗಮನಿಸಬೇಕು.ಸಾಮಾಜಿಕ ನ್ಯಾಯಕ್ಕಾಗಿ ಸದಾ ಧ್ವನಿಯೆತ್ತುತ್ತಿದ್ದ ಪ್ರಜಾವಾಣಿಯಂತ ಪತ್ರಿಕೆಯನ್ನೇ ಆಳುವ ಸರಕಾರ ಅಪರೇಷನ್ ಕಮಲಕ್ಕೆ ಒಳಪಡಿಸಿಕೊಂಡಿದೆಯೆಂದ ಮೇಲೆ ಸಾಮಾನ್ಯ ಪತ್ರಕರ್ತ ಆಮಿಷಗಳಿಗೆ ಬಲಿಯಾಗಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ.

ನನ್ನ ಪರಿಚಿತರೊಬ್ಬರ ಮಗಳ ಕಥೆ ಕೇಳಿ; ಆಕೆಗೆ ರಂಗಭೂಮಿ, ಸಾಹಿತ್ಯ, ಸಂಗೀತದ ಹಿನ್ನೆಲೆಯಿತ್ತು. ಸಿಇಟಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ಆಕೆಗೆ ಮೆಡಿಕಲ್, ಇಂಜಿನಿಯರ್ ಓದಲು ಅವಕಾಶ ಸಿಕ್ಕಿದರೂ ಆಸಕ್ತಿಯಿಂದ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡಿದ್ದಳು . ತನ್ನ ಬೇರುಗಳು ಇನ್ನಷ್ಟು ಗಟ್ಟಿಯಾಗಲೆಂದು ಕಳೆದ ವರ್ಷ ಕನ್ನಡಪ್ರಭದಲ್ಲಿ ಇಂಟರ್ನ್ಶಿಪ್ ಮಾಡಿದ್ದಳು. ಅಲ್ಲಿನ ಹಿರಿಯ ಪತ್ರಕರ್ತರು ’ನೀನು ಪತ್ರಕರ್ತಳೇ ಆಗು. ಆದರೆ ಕನ್ನಡ ಪತ್ರಕೋದ್ಯಮಕ್ಕೆ ಮಾತ್ರ ಬರಬೇಡ’ ಎಂದು ಹರಸಿ ಕಳುಹಿಸಿದ್ದರು. ಆದರೆ ಪತ್ರಿಕೋದ್ಯಮದಲ್ಲಿ ಇತ್ತೀಚೆಗೆ ರಾಜಕಾರಣವನ್ನೂ ಮೀರಿ ನಡೆಯುತ್ತಿರುವ ಹೊಲಸುಗಾರಿಕೆಯನ್ನು ನೋಡಿ ಆಕೆ ಜುಗುಪ್ಸೆಗೊಂಡಿದ್ದಾಳೆ. ತನ್ನ ಆಸಕ್ತಿಯನ್ನು ಬದಲಿಸಿಕೊಂಡು ಸೈಕಾಲಾಜಿಯಲ್ಲಿ ಉನ್ನತ ವ್ಯಾಸಂಗ ಮಾಡುವ ನಿರ್ಧಾರ ಕೈಗೊಂಡಿದ್ದಾಳೆ.

ಇದನ್ನೆಲ್ಲಾ ಬರೆಯಲು ನನಗೆ ಸ್ಫೂರ್ತಿ ಸಿಕ್ಕಿದ್ದು ಯಾರಿಂದ ಗೊತ್ತಾ? ಕನ್ನಡದ ಸಂವೇದನಾಶೀಲ ಬರಹಗಾರ ಹಾಗೂ ಸಜ್ಜನ ಚಂದ್ರಶೇಖರ ಆಲೂರರಿಂದ. ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಮಡೆಸ್ನಾನದ ಬಗ್ಗೆ ನೀಡಿದ ಅಭಿಪ್ರಾಯಗಳಿಂದ. ಇದರಿಂದ ಅವರು ಎರಡು ಶಕ್ತಿಗಳನ್ನು ಎದುರು ಹಾಕಿಕೊಂಡರು. ಒಂದು ಪ್ರಜಾವಾಣಿಯಂತ ಪತ್ರಿಕೆಯನ್ನು. ಇನ್ನೊಂದು ಸಾಹಿತ್ಯದ ಪ್ರಭಲ ಶಕ್ತಿ ಕೇಂದ್ರಗಳಲ್ಲಿ ಒಂದಾದ ಹೆಗ್ಗೊಡನ್ನು.

ಪ್ರತಿಭಟಿಸಬೇಕಾದ ಸಂದರ್ಭದಲ್ಲಿ ಕೂಡಾ ಮೌನವಾಗಿದ್ದರೆ ಅದು ವ್ಯವಸ್ಥೆಯನ್ನು ಪೋಷಿಸಿದಂತಾಗುತ್ತದೆ. ಪ್ರತಿಭಟನೆಯಿಂದ ಯಾವ ಪ್ರಯೋಜನವೂ ಆಗದೇ ಇರಬಹುದು. ಆದರೆ ಪ್ರತಿಭಟನೆ ನಮ್ಮ ಸಂವಿಧಾನಿಕ ಹಕ್ಕು. ಅದು ಪ್ರಜಾಪ್ರಭುತ್ವದ ಜೀವಾಳ.

1 comments:

john said...


It is safe to say that you are in perplexity as you can't move and purchase bitcoin in Blockchain? On the off chance that indeed, you can address the knowledgeable experts who are constantly dynamic and make a point to annihilate the blunders in an insignificant time with most extreme flawlessness. Dial Blockchain Support Phone Number 1-800-665-which is constantly accessible and clients can contact the group to examine the questions and to accomplish open arrangements from the group. These specialists have an affair of decades working in Blockchain. Hence, they can tell the arrangements on the spot immediately.

Post a Comment