Visitors

ಬಿಯಾಂಡ್ ದಿ ನ್ಯೂಸ್ -ಇಂದಿನ ಅಗತ್ಯ

ಮೊನ್ನೆ ಯಾರೋ ಹೇಳುತ್ತಿದ್ದರು; ಈಗ ಜರ್ನಲಿಸ್ಟ್ ಗಳು ಪರಸ್ಪರ ಎದುರಾದಾಗ ಕೇಳಿಕೊಳ್ಳುವ ಮೊದಲ ಪ್ರಶ್ನೆ ಎಂದರೆ ’ನನ್ನ ಬ್ಲಾಗ್ ನೋಡಿದ್ಯಾ?’ ಅಂದರೆ ಇಂದಿನ ಪತ್ರಕರ್ತರ ಆದ್ಯತೆಗಳಲ್ಲಿ ಬ್ಲಾಗ್ ನಡೆಸುವುದೂ ಒಂದು.
ಹಿಂದೆಲ್ಲಾ ನನ್ನ ವರದಿ ನೋಡಿದ್ರಾ? ಲೇಖನ ಓದಿದ್ರಾ? ನಿಮಗೇನನ್ನಿಸಿತು ಎನ್ನುತ್ತಿದ್ದ ಪತ್ರಕರ್ತರೀಗ ಬ್ಲಾಗ್ ಓದುವಂತೆ ಒತ್ತಾಯಿಸುತ್ತಿದ್ದಾರೆ.

ಆ ಬ್ಲಾಗ್ ಗಳನ್ನು ನೀವು ಒಪನ್ ಮಾಡಿ ಓದಿದ್ರೆ ನಿಮ್ಮ ತಲೆ ಕೆಟ್ಟು ಕೆರ ಹಿಡಿದು ಹೋದೀತು. ಅತೃಪ್ತ ಆತ್ಮದ ಹಳವಂಡಗಳ ಸರಮಾಲೆ. ಮನುಷ್ಯ ಮೂಲತಃ ಕ್ರೂರಿ ಎಂಬ ಮನೋವಿಶ್ಲೇಷಕರ ಮಾತನ್ನು ಇವು ಸಾಬೀತು ಪಡಿಸುತ್ತವೆ. ಆತ ಯಾರ ಏಳಿಗೆಯನ್ನೂ ಸಹಿಸಲಾರ. ಸಮಾಜವನ್ನು ಸರಿ ದಾರಿಯಲ್ಲಿ ಮುನ್ನಡೆಸಲು ಅವಕಾಶವಿರುವ ಪತ್ರಕರ್ತರು ಕೂಡ ಕ್ಷುಲಕ ವಿಚಾರಗಳಿಗೆ ಪರಸ್ಪರ ಕೆಸರೆರಚಿಕೊಂಡು ತಮ್ಮ ಕರ್ತವ್ಯವನ್ನು ಮರೆತರೆ?

ಪತ್ರಕರ್ತರಲ್ಲಿ ವೃತ್ತಿಪರತೆ ಮಾಯವಾಗುತ್ತಿದೆ ಎಂದು ಎಲ್ಲರೂ ಹೇಳುತ್ತಾರೆ. ಅದಕ್ಕೆ ಉದಾಹರಣೆಗಳೂ ಸಿಗುತ್ತಿವೆ. ಈಗ ಮುದ್ರಣ ಮಾಧ್ಯಮದ ಬಹುತೇಕ ವರದಿಗಾರರು ಪತ್ರಿಕಾ ಗೋಷ್ಠಿಗಳಿಗೆ ಹಾಜರಾಗುವುದಿಲ್ಲ. ಆದರೆ ಸುದ್ದಿ ಬರೆದು ಕೊಡುತ್ತಾರೆ. ಹೇಗೆ ಗೊತ್ತೆ? ಹೇಗೂ ನ್ಯೂಸ್ ಚಾನಲ್ ನವರು ಕವರ್ ಮಾಡುತ್ತಾರಲ್ಲ...ಅದನ್ನೇ ನೋಡಿಕೊಂಡು ನಾಲ್ಕು ಸಾಲು ಗೀಚಿದರಾಯ್ತು ಎಂಬ ಉಢಾಪೆ. ಏನಾದರೂ ಸ್ಪಷ್ಟಿಕರಣ ಬೇಕೆಂದಾದರೆ ಸಂಚಾರಿ ದೂರವಾಣಿ ಇದೆಯಲ್ಲಾ. ಆದರೆ ಬಹಳಷ್ಟು ಪತ್ರಕರ್ತರಿಗೆ ಸಂಶಯಗಳೇ ಹುಟ್ಟುವುದಿಲ್ಲ. ಕುಳಿತಲ್ಲಿಯೇ ವರದಿ ಸಿದ್ದಗೊಳ್ಳುತ್ತದೆ; ತನಿಖಾ ವರದಿ ಹುಟ್ಟಿಕೊಳ್ಳುತ್ತದೆ. ರಾಜಕೀಯ ವಿಶ್ಲೇಷಣೆ ರೂಪು ಪಡೆಯುತ್ತದೆ.

ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದಂತೆ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಪತ್ರಿಕಾರಂಗವೂ ಸ್ವಸ್ಥ ಸಮಾಜ ರಚನೆಗಾಗಿ ದುಡಿಯುತ್ತಿರಬೇಕು. ಸದಾ ಎಚ್ಚರದಿಂದಿರಬೇಕು. ಆದರೆ ಪತ್ರಕರ್ತರು ತೂಕಡಿಸುತ್ತಿದ್ದಾರೆ. ಇಲ್ಲವೇ ರಾಜಕಾರಣ ಮಾಡುತ್ತಿದ್ದಾರೆ. ಅವರು ಸುದ್ದಿಯ ಬೆನ್ನು ಹತ್ತುವುದಿಲ್ಲ.

ಕಳೆದ ವಾರ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳು ತಮ್ಮ ಆತ್ಮೀಯರಲ್ಲಿ ಹೇಳಿಕೊಂಡ ಮಾತೊಂದನ್ನು ನಿಷಾದ ಕೇಳಿಸಿಕೊಂಡಿದೆ. ಅವರೊಮ್ಮೆ ವಿಶ್ವವಿದ್ಯಾಲಯದ ಪರೀಕ್ಷೆ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ಕೊಟ್ಟರಂತೆ. ಹಾಲ್ ಹೊರಗಡೆ ಸೂಟ್ ಕೇಸ್ ಗಳು, ಟ್ರಾವಲ್ ಬ್ಯಾಗ್ ಗಳು ಸಾಲಾಗಿ ಇಟ್ಟುಕೊಂಡಿತ್ತಂತೆ. ವಿಚಾರಿಸಿದಾಗ ಅವೆಲ್ಲಾ ಪರೀಕ್ಷೆ ಬರೆಯಲು ಬಂದ ನಾರ್ತ್ ಇಂಡಿಯನ್ಸ್ ಸ್ಟೂಡೆಂಟ್ಸ್ ಗಳದು ಅಂತೆ. ಈ ವಿದ್ಯಾರ್ಥಿಗಳು ಕ್ಲಾಸಿಗೆ ಅಟೆಂಡ್ ಆಗುವುದಿಲ್ಲ. ಆದರೆ ಅವರಿಗೆ ಹಾಜರಿ ನೀಡಲಾಗುತ್ತದೆ. ಅವರು ಪರೀಕ್ಷೆಗೆ ಹಾಜರಾಗುತ್ತಾರೆ. ಆದರೆ ಫೈಲ್ ಆಗುತ್ತಾರೆ. ಅದಕ್ಕಾಗಿ ರಿವ್ಯಾಲ್ಯುವೇಷನ್ ಗೆ ಹಾಕುತ್ತಾರೆ. ಅಲ್ಲಿ ಅವರನ್ನು ಪಾಸು ಮಾಡಿಸಲಾಗುತ್ತದೆ. ಅಂತಹ ಒಂದು ಜಾಲವೇ ಸಕ್ರೀಯವಾಗಿ ಕೆಲಸ ಮಾಡುತ್ತಿದೆ. ಪ್ರಮುಖ ರಾಜಕಾರಣಿಯೊಬ್ಬರು ಈ ಜಾಲದ ಹಿಂದಿದ್ದಾರೆ ಎನ್ನಲಾಗುತ್ತಿದ್ದಾರೆ.

ಮೇಲಿನ ವಿಷಯ ಬಿಡಿ; ಕಳೆದ ಅಲ್ಲ ಅದಕ್ಕೂ ಹಿಂದಿನ ವಾರ ಕರ್ನಾಟಕ ಮತ್ತು ಅಂಧ್ರ ಗಡಿ ವಿವಾದದ ಬಗ್ಗೆ ಓಬಳಾಪುರ ಗಣಿಗಾರಿಕೆ ಕುರಿತಂತೆ ಕೇಂದ್ರ ಸರ್ವೆ ತಂಡ ಆಗಮಿಸಿದ ಬಗ್ಗೆ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿತ್ತು. ಆದರೆ ನಿಜ ವಿಷಯ ಏನೆಂದರೆ; ಸರ್ವೆ ತಂಡ ಬಂದದ್ದು ನಿಜ,ಆದರೆ ಅದು ಬಂದಿದ್ದು ಅಂದ್ರದ ಎರಡು ಗಣಿಗಳ ನಡುವಿನ ಬಿಕ್ಕಟ್ಟು ಪರಿಶೀಲನೆಗೆ. ಪತ್ರಕರ್ತರು ಕೌಂಟರ್ ಚೆಕ್ ಮಾಡಬೇಡವೇ?

ಮೊನ್ನೆ ಗೋವಿಂದರಾಜನಗರ ಉಪಚುನಾವಣೆ ನಡೆಯಿತ್ತಲ್ಲಾ... ಬಹಿರಂಗ ಪ್ರಚಾರ ನಡೆದ ಸಂಜೆ ೬ ಘಂಟೆಗೆ ಸುವರ್ಣ ಚಾನಲ್ ನಲ್ಲಿ ಕಾಂಗ್ರೇಸ್ ಅಬ್ಯರ್ಥಿ ಪ್ರಿಯಾಕೃಷ್ಣನ ಸಂದರ್ಶನ ಪ್ರಸಾರ ಆರಂಭವಾಗಿತ್ತು. ಸುಂದರವಾದ ಸಂದರ್ಶಕಿ ಪ್ರಶ್ನೆ ಹಾಕುತ್ತಿದ್ದಳು. ಸ್ವಲ್ಪ ಹೊತ್ತಿನಲ್ಲಿ ಟೀವಿ ಪರದೆಯ ಮೇಲೆ ಪ್ರಾಯೋಜಿತ ಕಾರ್ಯಕ್ರಮ ಎಂಬ ಮಾಹಿತಿ ಮೂಡಿಬಂತು. ಅದಾದ ಸ್ವಲ್ಪ ಹೊತ್ತಿನಲ್ಲಿ ಕಾರ್ಯಕ್ರಮವೇ ನಿಂತು ಹೋಗಿ ಬೇರೆ ಕಾರ್ಯಕ್ರಮ ಬಂತು. ಅಲ್ಲಿ-ಇಲ್ಲಿ ವಿಚಾರಿಸಿದಾಗ ಪೇಪರುಗಳನ್ನು ಸೆಂಟಿಮೀಟರ್ ಗಳಲ್ಲಿ ಖರೀದಿ ಮಾಡಿ ಸುದ್ದಿಗಳನ್ನು ಪ್ರಚಾರ ಮಾಡಿದ ಹಾಗೆ ಸುವರ್ಣ ನ್ಯೂಸ್ ಚಾನಲ್ ನ ಅರ್ಧ ಘಂಟೆಯ ಸ್ಲಾಟ್ ಪರ್ಚೇಸ್ ಮಾಡಿದ್ದರು. ಆದರೆ ’ಪ್ರಾಯೋಜಿತ’ ಎಂಬ ಸ್ಟಿಕ್ಕರ್ ಬಂದಾಗ ಅವರು ಹಿಂತೆಗೆದರು. ಯಾಕೆಂದರೆ ಚುನಾವಣಾ ಆಯೋಗ ಅದಕ್ಕೂ ಲೆಖ್ಖ ಕೇಳುತ್ತೆ.

ಮುಂದೆ ನಡೆದ ಬೆಳವಣಿಗೆಗಳು ಟಾಬ್ಲಾಯ್ಡ್ ಪತ್ರಿಕೆಗಳಿಗೆ ಲೇಖನವಾಗಬಲ್ಲುದು. ಕಾಂಗ್ರೇಸ್ ಸಂಪರ್ಕಿಸಿದ್ದು ಟೀವಿ೯ ಚಾನಲ್ ಇರಬಹುದೇ? ಯಾಕೆಂದರೆ ಮರುದಿನದಿಂದಲೇ ಬಿಜೇಪಿ ಅಭ್ಯರ್ಥಿ ಸೋಮಣ್ಣನ ವಿರೋಧಿ ನ್ಯೂಸ್ ಗಳು ಮತ್ತೆ ಮತ್ತೆ ಟೀವಿ ೯ನಲ್ಲಿ ಪ್ರಸಾರಗೊಂಡವು.

ಇದನ್ನೆಲ್ಲಾ ಪತ್ರಕರ್ತನಾದವನು ಗಮನಿಸುತ್ತಿರಬೇಕು. ಟೀವಿ ಚಾನಲ್ ಗಳಲ್ಲಿ ಬರೆಯಲು ಬರುವವರು ಕಡಿಮೆ. ವಾರ್ತಾವಾಚಕಿಯರು ಗೊಂಬೆಗಳು. ಬರೆದ್ದದ್ದನ್ನಷ್ಟೇ ಓದುತ್ತಾರೆ. ಕ್ಯಾಮರವೇ ಬಹಳಷ್ಟನ್ನು ಹೇಳುತ್ತದೆ. ದಿನಪತ್ರಿಕೆಗಳು ಸುದ್ದಿಯನ್ನಷ್ಟೇ ನೀಡುತ್ತವೆ. ನಿನ್ನೆ ಟೀವಿಯಲ್ಲಿ ನೋಡಿದ್ದಷ್ಟೇ ವಿವರಗಳು ಇಂದು ಪತ್ರಿಕೆಯಲ್ಲಿ ಬರುವುದಾದರೆ ಪತ್ರಿಕೆಗಳು ಯಾಕೆ ಬೇಕು? ಸುದ್ದಿಯಾಚೆಗಿನ ಸುದ್ದಿ ನಮಗೆ ಬೇಕು- ’ಬಿಯಾಂಡ್ ದಿ ನ್ಯೂಸ್’ ಅದು ಇಂದಿನ ಅಗತ್ಯ.

1 comments:

Unknown said...

ಬ್ಲಾಗ್‌ಗಳ ಯುಗದಲ್ಲಿ ಅತಿ ಹಿಟ್‌ಗಳನ್ನು ಪಡೆಯುವುದು ಅನಾಮಿಕ ಬ್ಲಾಗ್‌ಗಳು. ಅಲ್ಲಿ ಬರೆಯುವ ಲೇಖನಗಳಿಗೆ ಪ್ರತಿಕ್ರಿಯೆ ನೀಡುವವರಿಗೆನೂ ಕಮ್ಮಿ ಇಲ್ಲ . ಅಂತಹುದರಲ್ಲಿ ನಿಮ್ಮ ಲೇಖನಗಳಿಗೆ ಯಾರೊಬ್ಬರೂ ಕಾಮೆಂಟ್‌ ನೀಡಿದಿರುವುದನ್ನು ಕಂಡಾಗ ನನಗೆ ಅಚ್ಚರಿ. ಅಂದ ಹಾಗೆ ನಾನು ಅನಾಮಿಕನೇ. ಹೀಗೆ ಬರೆಯುತ್ತಿರಿ ಮಾಧ್ಯಮಗಳ ಹುಳುಕುಗಳನ್ನು.. ನಿಷ್ಪಕ್ಷಪಾತವಾಗಿ...

Post a Comment